ಮುಂಬರುವ ಚುನಾವಣೆಗೆ ಮೋದಿಯ ಓಲೈಸುವ ಯತ್ನ

ನವದೆಹಲಿ, ಜು.4-ಮುಂಬರುವ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿ ಕೃಷಿಕರನ್ನು ಓಲೈಸುವ ಯತ್ನ ನಡೆಸಿದೆ.
ಭತ್ತ, ರಾಗಿ ಮತ್ತು ಕಬ್ಬು ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ(ಎಂಎಸ್‍ಪಿ)ಯನ್ನು ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ಇದು ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಏರಿಕೆ ಎಂದು ಬಣ್ಣಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯು 14 ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಶೇಕಡ 150ರಷ್ಟು ಗರಿಷ್ಠ ಎಂಎಸ್‍ಪಿ ನಿಗದಿಗೊಳಿಸಲಾಗಿದೆ. ಈ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 15,000 ಕೋಟಿ ರೂ.ಗಳನ್ನು ವ್ಯಯಿಸಬೇಕಾಗಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಉತ್ಪಾದನಾ ವೆಚ್ಚಕ್ಕಿಂತಲೂ ಶೇಕಡ 50ರಷ್ಟು ಹೆಚ್ಚಿನ ದರವನ್ನು ಪಾವತಿಸುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಈ ಬೆಳೆಗಳಿಗೆ ಪ್ರತಿ ಕ್ವಿಂಟಾಲ್‍ಗೆ 200 ರೂ.ಗಳ ಎಂಎಸ್‍ಪಿ ಘೋಷಿಸಲು ಇಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಮುಖ್ಯವಾಗಿ ಭತ್ತ(ಸಾಮಾನ್ಯ ವಿಧ), ರಾಗಿ ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಮುಂಗಾರು ಹಂಗಾಮಿನಲ್ಲಿ 14 ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಶೇಕಡ 150ರಷ್ಟು ಎಂಎಸ್‍ಪಿ ದೊರೆಯಲಿದೆ. ಇದರಿಂದಾಗಿ (200 ರೂ. ಎಂಎಸ್‍ಪಿ ಹೆಚ್ಚಳ) ಪ್ರತಿ ಕ್ವಿಂಟಾಲ್ ಭತ್ತ 1,750 ರೂ.ಗಳಿಗೆ ಹೆಚ್ಚಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ