ಇದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಳಗ್ಗೆ 11.30ಕ್ಕೆ ಮಂಡಿಸಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್‍ನ ಮುಖ್ಯಾಂಶಗಳು

ಬೆಂಗಳೂರು,ಜು.4- ಸಣ್ಣ , ಅತೀಸಣ್ಣ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದವರೆಗಿನ ಸಾಲ ಮನ್ನಾ, ಗಭಿರ್ಣಿ-ಬಾಣಂತಿಯರಿಗೆ 6 ತಿಂಗಳ ಮಾಸಾಶನ ಹಾಗೂ ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ, ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ತೆರಿಗೆ ಏರಿಕೆ, ಆಶ್ರಯ ಮನೆಗೆ ನೀಡುತ್ತಿದ್ದ ಸಹಾಯಧನ ಹೆಚ್ಚಳ, ಭೂ ಕಬಳಿಕೆ ನಿಷೇಧ ಕಾಯ್ದೆ, ಕೈ ಸುಡಲಿರುವ ಸಿಗರೇಟ್, ಬೆಲೆ ಏರಿಕೆಯ ಕಿಕ್ ಕೊಡಲಿರುವ ಮದ್ಯ….
ಇದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಮಂಡಿಸಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್‍ನ ಮುಖ್ಯಾಂಶಗಳಿವು.
ವಿಶೇಷವೆಂದರೆ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುತ್ತಿರುವುದು ಇದೇ ಮೊದಲು. ಈ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರೂ ಬಜೆಟ್ ಮಂಡನೆ ಮಾಡಲಿರಲಿಲ್ಲ.
ನಾಳೆ ಬೆಳಗ್ಗೆ 11.30ಕ್ಕೆ ಸರಿಯಾಗಿ ವಿಧಾನಸೌಧದಲ್ಲಿ ದೋಸ್ತಿ ಸರ್ಕಾರದ ಬಜೆಟ್ ಮಂಡಿಸಲಿರುವ ಅವರು ಕರ್ನಾಟಕದ ಅಭಿವೃದ್ಧಿಯ ಮುನ್ನೋಟವನ್ನು ತೆರೆದಿಡಲಿದ್ದಾರೆ.
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಜನಪ್ರಿಯ ಯೋಜನೆಗಳನ್ನು ಘೋಷಿಸದೆ ಸಾಮಾನ್ಯ ಜನರಿಗೆ ಹೊರೆಯಾಗದಂತೆ ಸರ್ವರನ್ನು ಸಂಪ್ರೀತಿಗೊಳಿಸುವಂತೆ ಹಾಗೂ ಅಭಿವೃದ್ಧಿಗೆ ಪೂರಕವಾಗುವ ಆಯವ್ಯಯವನ್ನು ಮಂಡಲಿಸಲಿದ್ದಾರೆ.
ವಿಧಾನಸಭೆಯ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಒಂದು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ.
ಎರಡು ಹಂತಗಳಲ್ಲಿ ರೈತರ ಸಾಲ ಮನ್ನಾ ಯೋಜನೆ ಪ್ರಕಟವಾಗಲಿದ್ದು , ಸುಮಾರು 70 ಲಕ್ಷ ರೈತರು ಸರ್ಕಾರದ ಸಾಲಮನ್ನಾದ ಲಾಭ ಪಡೆಯುವರು. ಇದರಿಂದ ಬೊಕ್ಕಸಕ್ಕೆ 53 ಸಾವಿರ ಕೋಟಿ ಹೊರೆಯಾಗಲಿದೆ. ಮೊದಲ ಹಂತದಲ್ಲಿ 33 ಸಾವಿರ ಕೋಟಿ ಸಾಲ ಮನ್ನಾವಾಗಲಿದೆ ಎಂದು ತಿಳಿದುಬಂದಿದೆ.
ರಾಜ್ಯದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ್ದ ಆರೋಗ್ಯ ಕರ್ನಾಟಕ ಯೋಜನೆ ಮುಂದುವರೆಯಲಿದೆ.
ಎಲ್ಲ ಕುಟುಂಬಗಳಿಗೆ ಒಂದೂವರೆ ಲಕ್ಷದವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಂದೂವರೆ ಲಕ್ಷದ ತನಕ ಚಿಕಿತ್ಸೆ ಹಾಗೂ 50 ಸಾವಿರ ರೂ.ಗಳ ಹೆಚ್ಚಿನ ಚಿಕಿತ್ಸೆ ಸಿಗಲಿದೆ.
ಕ್ಯಾನ್ಸರ್, ಕಿಡ್ನಿ , ಹೃದ್ರೋಗಗಳಿಗೆ ಅಗತ್ಯವಿರುವ ತುರ್ತು ಸೇವೆ ಒದಗಿಸಲು ರಾಜ್ಯದ ಮಹಾನಗರ ಪಾಲಿಕೆಗಳಾದ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ ನಗರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ , ಮಧುಮೇಹ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ಮನೆ ಬಾಗಿಲಿಗೇ ಜನರಿಕ್ ಔಷಧಿ ತಲುಪಿಸುವ ಯೋಜನೆಯನ್ನು ಕುಮಾರಸ್ವಾಮಿ ಘೋಷಣೆ ಮಾಡಲಿದ್ದಾರೆ.
ಸೆಸ್ ದರ ಹೆಚ್ಚಳ:
ರೈತರ ಸಾಲಮನ್ನಾ ಮಾಡುತ್ತಿರುವುದರಿಂದ ಬೊಕ್ಕಸಕ್ಕೆ ಉಂಟಾಗುತ್ತಿರುವ ಹೊರೆಯನ್ನು ಸರಿದೂಗಿಸಿ ಸಂಪನ್ಮೂಲ ಕ್ರೌಢೀಕರಣಕ್ಕೆ ಒತ್ತು ನೀಡಲಿರುವ ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರದ ಮೇಲಿನ ತೆರಿಗೆಯನ್ನು 1ರಿಂದ 1.50 ರೂ.ಗೆ ಏರಿಕೆ ಮಾಡಲಿದ್ದಾರೆ. ಇದರಿಂದ ವಾರ್ಷಿಕವಾಗಿ ಸರ್ಕಾರದ ಬೊಕ್ಕಸಕ್ಕೆ 6ರಿಂದ 8 ಸಾವಿರ ಕೋಟಿ ಸಿಗಲಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನವನ್ನು ಈಡೇರಿಸಲು ಮುಂದಾಗಿರುವ ಕುಮಾರಸ್ವಾಮಿಯವರು ಗರ್ಭಿಣಿಯರಿಗೆ ತಿಂಗಳ ಮಾಸಾಶನವಾಗಿ 6,500 ರೂ. ನೀಡುವ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ.
ಈ ಯೋಜನೆ ಪ್ರಕಾರ ಹೆರಿಗೆಗೂ ಮುನ್ನ 3 ತಿಂಗಳು ಹಾಗೂ ಹೆರಿಗೆಯಾದ ನಂತರ 3 ತಿಂಗಳು ಮಹಿಳೆಯರು ಇದರ ಲಾಭ ಪಡೆಯುವರು. ಹಿರಿಯ ನಾಗರಿಕ ನೀಡಲಾಗುತ್ತಿರುವ 500 ಮಾಸಾಶನವನ್ನು ಒಂದು ಸಾವಿರ ರೂ.ಗೆ ಏರಿಕೆ ಮಾಡುವ ಪ್ರಸ್ತಾವನೆ ಇದ್ದರೂ ಆರ್ಥಿಕ ಹೊರೆಯಿಂದ ಕಾರ್ಯಸಾಧವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಮಾರ್ಗಸೂಚಿದರ
ಸಂಪನ್ಮೂಲ ಕ್ರೋಢೀಕರಣ ಮಾಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿರುವುದರಿಂದ ಬಜೆಟ್‍ನಲ್ಲಿ ನಗರದ ಹೊರವಲಯಗಳಲ್ಲಿನ ಆಸ್ತಿ ಗಳ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಸಂಭವವಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ದಾವಣಗೆರೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ 2ನೇ ಹಂತದ ನಗರಗಳಲ್ಲಿ ಸರ್ಕಾರಿ ಆಸ್ತಿಯ ಮಾರ್ಗಸೂಚಿ ದರ ದುಪ್ಪಟ್ಟಾಗುವ ನಿರೀಕ್ಷೆ ಇದೆ.
ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲೇಬೇಕಾಗಿರುವುದರಿಂದ ಸಿಗರೇಟ್ ಮತ್ತು ಮದ್ಯದ ದರವು ಹೆಚ್ಚಳವಾಗುವುದರಲ್ಲಿ ಸಂದೇಹವಿಲ್ಲ.
ಇದೇ ರೀತಿ ಶಾಸಕರಿಗೆ ನೀಡಲಾಗತ್ತಿದ್ದ ಅನುದಾನವನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಪ್ರತಿವರ್ಷ ಓರ್ವ ಶಾಸಕರಿಗೆ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯಡಿ ಕೋಟಿ ಹಣ ನೀಡಲಾಗುತ್ತಿತ್ತು.
ಈ ಹಣದಲ್ಲಿ ಖರ್ಚಾಗದೆ ಇರುವ ಅನುದಾನವನ್ನು ಬೊಕ್ಕಸಕ್ಕೆ ಹಿಂದಿರುಗಿಸುವಂತೆ ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೂ ಸೂಚನೆ ಕೊಡಲಾಗಿದೆ.
ಭಾಗ್ಯಗಳಿಗೆ ಅನುದಾನ ಕಡಿತ:
ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳು ಮುಂದುವರೆಯುತ್ತವೆ ಯಾದರೂ ಅನುದಾನ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಅನ್ನ ಭಾಗ್ಯ ಯೋಜನೆ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಅನುದಾನ ಕಡಿತವಾಗಲಿದೆ.
ಕ್ಷೀರಾಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ ಸೇರಿದಂತೆ ಮತ್ತಿತರ ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲಿದ್ದಾರೆ.
ಕೃಷ್ಣ, ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳಿಗೆ ಐದು ವರ್ಷ ಅವಧಿಯಲ್ಲಿ 1.25 ಲಕ್ಷ ಕೋಟಿ ಅನುದಾನ ಘೋಷಣೆಯಾಗಲಿದೆ. ಬಾಕಿ ಇರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದು, ವಿದೇಶಿ ತಂತ್ರಜ್ಞಾನ ಅಳವಡಿಸಿಕೊಂಡು ಜಲಾಶಯಗಳಲ್ಲಿರುವ ಹೂಳೆತ್ತುವುದು ಸೇರಿದಂತೆ ಮತ್ತಿತರ ಯೋಜನೆಗಳು ಪ್ರಕಟವಾಗಲಿವೆ.
ರಾಜ್ಯಾದ್ಯಂತ ಇನ್ನು ಹೆಚ್ಚಿನ ಕೃಷಿ ಹೊಂಡಗಳ ನಿರ್ಮಾಣ, ಇಸ್ರೇಲ್ ಮಾದರಿಯಲ್ಲಿ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಮಂಡ್ಯ ಮತ್ತು ಉತ್ತರ ಕರ್ನಾಟಕದಲ್ಲಿ ತಲಾ ಒಂದು ಜಿಲ್ಲೆ ಆಯ್ಕೆ, 4 ಲಕ್ಷ ಮನೆಗಳ ನಿರ್ಮಾಣ, ಪ್ರಸಕ್ತ ವರ್ಷ 20 ಲಕ್ಷ ಉದ್ಯೋಗ ಸೃಷ್ಟಿ , ಕೌಶಲ್ಯ ವಿಶ್ವವಿದ್ಯಾನಿಲಯ ಸ್ಥಾಪನೆ ರಾಮನಗರ ಸಮೀಪದ ಬಿಡದಿ ಬಳಿ ಟೌನ್‍ಶಿಪ್ ನಿರ್ಮಾಣ ಮಾಡುವ ಯೋಜನೆಯು ಘೋಷಣೆಯಾಗಲಿದೆ.
ಇನ್ನು ರಾಜಧಾನಿ ಬೆಂಗಳೂರಿಗೂ ಬಜೆಟ್‍ನಲ್ಲಿ ವಿಶೇಷ ಯೋಜನೆಗಳು ಪ್ರಕಟವಾಗಲಿವೆ. ರಸ್ತೆಗಳ ಅಗಲೀಕರಣ, ಫ್ಲೈಓವರ್ ನಿರ್ಮಾಣ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ನಗರದ ಜನತೆಗೆ ವಿಶೇಷ ಕೊಡುಗೆ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ