
ಬೆಂಗಳೂರು, ಜು.4-ಪದವಿಪೂರ್ವ ಕಾಲೇಜುಗಳಲ್ಲಿ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಪರಿಷತ್ ಸದಸ್ಯ ಹರೀಶ್‍ಕುಮಾರ್ ಅವರು 330 ಅಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರು, ಈ ಬಾರಿ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಮೂಲಕ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಆನ್‍ಲೈನ್ ಮೂಲಕ ನೇಮಕ ಮಾಡಿಕೊಂಡರೆ ಹತ್ತು ವರ್ಷದಿಂದ ಸೇವೆ ಸಲ್ಲಿಸಿದವರೆಲ್ಲ ಕೈಬಿಟ್ಟುಹೋಗುತ್ತಾರೆ. ಅವರಿಗೆಲ್ಲ ಅವಕಾಶ ಕೊಟ್ಟ ನಂತರ ನೀವು ಆನ್‍ಲೈನ್ ಮೂಲಕ ನೇಮಕ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.
10-15 ವರ್ಷ ಸೇವೆ ಸಲ್ಲಿಸಿದವರು ಖಾಯಂ ಮಾಡಿ ಎಂದು ಹೋರಾಟಕ್ಕೆ ಇಳಿಯುತ್ತಾರೆ. ಹಾಗಾಗಿ ಮತ್ತೆ ಅವರನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಹೊಸದಾಗಿ ನೇಮಕ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದು ಜಿ.ಟಿ.ದೇವೇಗೌಡರು ಹೇಳಿದರು.
ಸಚಿವರ ಕೈಯಲ್ಲೇ ಎಲ್ಲ ಅಧಿಕಾರವಿರುತ್ತದೆ. ಕಳೆದ ಬಾರಿ ಸಚಿವರೇ ಅಧಿಕಾರ ಚಲಾಯಿಸಿದ್ದರು. ನೀವು ಕೂಡ ಹಾಗೆ ಮಾಡಿ ಎಂದು ಸಭಾಪತಿ ಅವರು ಸೂಚನೆ ನೀಡಿದರು.
ಆಗ ಜಿಟಿಡಿ ಅವರು ಎಲ್ಲರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.