ಬೆಂಗಳೂರು, ಜು.4-ಸಂಸತ್ತಿನ ಅಧಿವೇಶನದಲ್ಲಿ ಅಸ್ಪೃಶ್ಯರ ದೌರ್ಜನ್ಯ ತಡೆ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆಗೊಳಿಸದೆ ಯಥಾವತ್ತಾಗಿ ಅಂಗೀಕರಿಸಲು ಒತ್ತಾಯಿಸಿ ದೇಶಾದ್ಯಂತ ಲಕ್ಷಾಂತರ ದಲಿತರು ಮತ್ತು ಗಿರಿಜನರು ಜುಲೈ 25ರಂದು ದೆಹಲಿ ಚಲೋ ಹಮ್ಮಿಕೊಂಡಿರುವುದಾಗಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ವಿ.ನರಸಪ್ಪ, ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಲು ಕಾಯ್ದೆ ಇದೆ. ಈ ಕಾಯ್ದೆಯನ್ನು ಸುಪ್ರೀಂಕೋರ್ಟ್ ಬಲಹೀನಗೊಳಿಸಿದೆ. ಆದ್ದರಿಂದ ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಮುಂದುವರೆಯುತ್ತಿದೆ ಎಂದು ಆರೋಪಿಸಿದರು.
ದೆಹಲಿ ಚಲೋ ಹಮ್ಮಿಕೊಂಡು ನಂತರ ರಾಮ್‍ಲೀಲಾ ಮೈದಾನದಲ್ಲಿ ಸಮಾವೇಶಗೊಂಡು ಕಾಯ್ದೆಯನ್ನು ಯಥಾವತ್ತಾಗಿ ಮುಂದುವರೆಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.