ಮಾನಸ ಸರೋವರ ಯಾತ್ರಿಗರ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್​ ಬಳಕೆ ಸಾಧ್ಯತೆ: ಎಲ್ಲ ಯಾತ್ರಿಕರೂ ಸುರಕ್ಷಿತ

ಕಠ್ಮಂಡು: ನೇಪಾಳದ ಕೈಲಾಸ  ಮಾನಸ ಸರೋವರ ಯಾತ್ರೆಗೆ ತೆರಳಿದ್ದ 290 ಕನ್ನಡಿಗರು  ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಜನ ಅಲ್ಲಿನ ಭಾರೀ ಮಳೆಗೆ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
ನೇಪಾಳದ ಸಿಮಿಕೋಟ್​ನಲ್ಲಿರುವ ಯಾತ್ರಾರ್ಥಿಗಳು ಮಳೆಯಿಂದ ವಾಹನ ಸಂಪರ್ಕ ಮತ್ತು ಹೆಲಿಕ್ಯಾಪ್ಟರ್​ ಸಂಪರ್ಕವೂ ಸಾಧ್ಯವಾಗದೆ ಸ್ಥಳದಲ್ಲೇ ಕಾಯುವಂತಾಗಿದೆ. ಈ ಬಗ್ಗೆ ತುರ್ತು ಕಾರ್ಯಾಚರಣೆ ಕೇಂದ್ರ ಟ್ವೀಟ್​ ಮಾಡಿದೆ. ಹವಾಮಾನ ವೈಪರೀತ್ಯದಿಂದಾಗಿ  ಸಿಮಿಕೋಟ್​ನಲ್ಲಿ ಉಳಿದುಕೊಂಡಿರುವ ಭಾರತೀಯ ಸಂತ್ರಸ್ತ ಯಾತ್ರಾರ್ಥಿಗಳೊಂದಿಗೆ ಕಠ್ಮುಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರ ಭದ್ರತೆ ಹಾಗೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.  ಯಾತ್ರಾರ್ಥಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ  ನವದೆಹಲಿಯ ಕರ್ನಾಟಕ ಭವನದಲ್ಲಿರುವ  ಆಯುಕ್ತರಿಗೆ  ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೈಲಾಸ ಮಾನಸ ಸರೋವರ ಯಾತ್ರೆಯ ನೇಪಾಳ್​ಗಂಜ್​-ಸಿಮಿಕೋಟ್​-ಹಿಲ್ಸಾ ಮಾರ್ಗದ ಪರಿಶೀಲನೆ ನಡೆಸುತ್ತಿದೆ. ಇಂದು ಬೆಳಗ್ಗಿನ ಹವಾಮಾನವನ್ನು ಗಮನಿಸಿದರೆ ವಿಮಾನ ಅಥವಾ ಹೆಲಿಕಾಪ್ಟರ್​ಗಳು ಆ ಸ್ಥಳಕ್ಕೆ ಹೋಗುವುದು ದುಸ್ತರವೆನಿಸುತ್ತಿದೆ. ಭಾರತೀಯ ಯಾತ್ರಾರ್ಥಿಗಳಿರುವ ಮೂರು ಭಾಗಗಳ ಸದ್ಯದ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಟ್ವೀಟ್​ ಮೂಲಕ ಮಾಹಿತಿ ನೀಡುತ್ತಿದ್ದು, ಸದ್ಯದಲ್ಲೇ ರಕ್ಷಣಾ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ