ಬೆಂಗಳೂರು: ಸೆಲ್ಫಿ ಫೊಟೋ ತೆಗೆದುಕೊಳ್ಳುವಾಗ ಕೈಬೆರಳ ಮಾಹಿತಿ ಅದರಲ್ಲಿ ದಾಖಲಾಗದಂತೆ ನೋಡಿಕೊಳ್ಳಿ. ಏಕೆಂದರೆ, ಇಂತಹ ಫೋಟೊ ಸೈಬರ್ ಖದೀಮರ ಕೈಗೆ ಸಿಕ್ಕರೆ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆಯೂ ಇದೆ!
ಸೈಬರ್ ಖದೀಮರಿಂದ ಮೋಸಕ್ಕೊಳಗಾಗದಂತೆ ಜಾಗೃತಿ ಮೂಡಿಸುವ ಮತ್ತು ಎಚ್ಚರಿಸುವ ವೀಡಿಯೋವನ್ನು ಐಪಿಎಸ್ ಅಧಿಕಾರಿ ಐಜಿಪಿ ರೂಪಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಸೆಲ್ಫೀ ಫೋಟೋ ತೆಗೆಯುವಾಗ ವಿಕ್ಟರಿ ಮಾರ್ಕ್‌ಗಾಗಿ ಎರಡು ತೋರು ಬೆರಳುಗಳನ್ನು ಇಂಗ್ಲಿಷ್‌ನ ಅಕ್ಷರ ‘ವಿ’ ಆಕಾರದಲ್ಲಿ ತೋರಿಸುವುದು, ಡನ್ ಎಂದು ಹೇಳಲು ಹೆಬ್ಬೆಟ್ಟುಗಳನ್ನು ತೋರಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಈ ವೀಡಿಯೋ ಹೇಳುತ್ತಿದೆ.
ಸದ್ಯ ಲಭ್ಯವಿರುವ ಆಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಾವು ಅಪ್‌ಲೋಡ್ ಮಾಡಿದ ಬೆರಳುಗಳ ಮೂಲಕ ಬೆರಳೀನ ಗುರುತುಗಳನ್ನು (ಬೆರಳಚ್ಚು) ಪತ್ತೆಹಚ್ಚಿ ತಂತ್ರಜ್ಞಾನದ ನೆರವಿನಿಂದಲೇ ಅದೇ ರೀತಿಯ ಬೆರಳಚ್ಚನ್ನು ಮರು ಸೃಷ್ಟಿಸಿ ಖಾತೆಗಳಿಗೆ ಕನ್ನ ಹಾಕಬಹುದು ಎನ್ನುವುದು ವಿಡಿಯೋದ ಸಾರಾಂಶವಾಗಿದೆ.