ಜನರಿಗೆ ನರಕವನ್ನು ಸೃಷ್ಟಿ ಮಾಡದಿದ್ದರೆ ಅದೇ ಒಂದು ಪವಿತ್ರ ಸೇವೆ: ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಮಾರ್ಮಿಕ ಹೇಳಿಕೆ

 

ಬೆಂಗಳೂರು, ಜು.3- ಸ್ವರ್ಗವನ್ನು ಧರೆಗಿಳಿಸಲು ಸಾಧ್ಯವಾಗುವುದಿಲ್ಲ. ಆದರೆ, ಜನರಿಗೆ ನರಕವನ್ನು ಸೃಷ್ಟಿ ಮಾಡದಿದ್ದರೆ ಅದೇ ಒಂದು ದೊಡ್ಡ ಪವಿತ್ರ ಸೇವೆಯಾಗಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಮಾರ್ಮಿಕವಾಗಿ ವಿಧಾನಸಭೆಯಲ್ಲಿ ನುಡಿದರು.
ರಾಜ್ಯಪಾಲರ ಭಾಷಣವನ್ನು ಅನುಮೋದಿಸುವಂತೆ ಕೋರಿ ಮಾತನಾಡಿದ ಅವರು, ಜನರ ಋಣ, ಆಶೀರ್ವಾದಿಂದ ನಾವು ಸದನಕ್ಕೆ ಬಂದಿದ್ದೇವೆ. ಅವರಿಗೆ ಸೌಭಾಗ್ಯ ಕೊಡಲಾಗದಿದ್ದರೂ ಸಂಕಷ್ಟ ಕೊಡಬಾರದು. ಸರ್ಕಾರದ ಸೇವೆಗಳನ್ನು ಪಡೆದಿದ್ದೇವೆ ಎಂಬುದಕ್ಕಿಂತ ಕೊಂಡುಕೊಂಡಿದ್ದೇವೆ ಎಂಬ ಭಾವನೆ ಜನರಲ್ಲಿದೆ. ನಾವು ಸದನಕ್ಕೆ ಬಂದಿರುವುದು ಜನಸೇವೆ ಮಾಡಲು ಬಂದಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ನೆಲಮುಖಿ ಆಗುವುದು ಬೇಡ. ಗಗನಮುಖಿಯಾಗಿ ರಾಜ್ಯದ ರೈತರು ಹಾಗೂ ಜನರ ಸೇವೆ ಮಾಡಲು ಸದನ ಬಳಕೆ ಮಾಡಿಕೊಳ್ಳೋಣ ಎಂದರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಎರಡು ಹಳಿ ಮೇಲೆ ಚಲಿಸುವ ರೈಲಿಗೆ ಹೋಲಿಸಿದ ಅವರು, ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದ 20 ತಿಂಗಳ ಆಡಳಿತ ಜನ ಮೆಚ್ಚುಗೆಯಾಗಿತ್ತು. ಅದರಲ್ಲಿ ಬಿಜೆಪಿಯ ಕೊಡುಗೆಯೂ ಇತ್ತು. ಆ ಆಡಳಿತದ ನಂತರ ಕಹಿ ಇತ್ತು ಎಂದು ಹೇಳಿದರು.
ಎರಡು ಹಳಿಗಳ ಮೇಲೆ ಚಲಿಸುವ ರೈಲು ಒಂದು ಹಳಿ ಕಿತ್ತುಹೋದರೆ ಬಿದ್ದು ಹೋಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಮೈತ್ರಿ ಧರ್ಮ ಕಾಪಾಡಿಕೊಳ್ಳದಿದ್ದರೆ ಜನರಿಗೆ ಅನ್ಯಾಯವಾಗಲಿದೆ. ಮೈತ್ರಿ ಧರ್ಮ ಕಾಪಾಡಿಕೊಂಡು ಕೊಟ್ಟ ಮಾತು ಉಳಿಸುವುದು ಕಷ್ಟ. ಒಂದು ಪಕ್ಷದ ಸರ್ಕಾರ ಅಧಿಕಾರ ನಡೆಸಿದಾಗಲೇ ಭರವಸೆಗಳನ್ನು ಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಲು ಮೈತ್ರಿ ಸರ್ಕಾರದಲ್ಲಿ ಸಾಧ್ಯವಾಗುವುದಿಲ್ಲ ಎಂಬುದು ತಮ್ಮ ಭಾವನೆ ಎಂದರು.

ಸರ್ಕಾರದಲ್ಲಿ ಜೆಡಿಎಸ್‍ನವರು ಒಂದು ಭಾಗವಿದ್ದರೆ, ಕಾಂಗ್ರೆಸ್‍ನವರು ಎರಡು ಭಾಗವಿದ್ದಾರೆ. ಮೊದಲ ಎರಡು ಸಾಲಿನಲ್ಲಿ ಕುಳಿತಿರುವವರು ಮಾತ್ರ ಅರ್ಹರು. ಹಿಂದಿನ ಸಾಲಿನಲ್ಲಿ ಕುಳಿತವರು ಅರ್ಹರಲ್ಲ ಎಂಬ ಭಾವನೆ ಬೇಡ. ಆಗೊಂದು ವೇಳೆ ಭಾವಿಸಿ ನಮ್ಮದಿ, ಶಾಂತಿ ಕೆಡಿಸಬೇಡಿ, ಬರಲಾಗದವರು ಬಹಳಷ್ಟು ಮಂದಿ ಇದ್ದಾರೆ. ಯಾವುದೋ ಕಾರಣಕ್ಕಾಗಿ ಹೊರಗುಳಿದಿದ್ದಾರೆ ಎಂದು ಮಾರ್ಮಿಕವಾಗಿ ಸಚಿವರನ್ನು ಉದ್ದೇಶಿಸಿ ಮಾತನಾಡಿದರು.
ಮೊದಲು ಮಂತ್ರಿ ಸ್ಥಾನ ಬೇಕು. ಆನಂತರ ಇಂತದ್ದೇ ಖಾತೆ ಬೇಕು. ಇದೇ ಕೊಠಡಿ, ಅದೇ ಮನೆ, ಇದೇ ಅಧಿಕಾರಿ ಬೇಕು ಎಂದು ಪಟ್ಟು ಹಿಡಿಯಲಾಗುತ್ತಿದೆ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದು ಮುಖ್ಯಮಂತ್ರಿಗಳಿಗೆ ಸಂಕಷ್ಟವನ್ನುಂಟು ಮಾಡಿದೆ. ಈ ರೀತಿಯಾದರೆ ಜನರ ಕೆಲಸ ಹೇಗೆ ಮಾಡಲು ಸಾಧ್ಯ? ಒಂದು ವೇಳೆ ಜನರ ಕೆಲಸ ಮಾಡದೆ ಕಾಲ ಹರಣ ಮಾಡಿದ್ದೇ ಆದರೆ ನಿಮ್ಮ ಕಾಲಿನ ಮೇಲೆ ನೀವೇ ಚಪ್ಪಡಿ ಹಾಕಿಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.

ಮೂರು ಪಕ್ಷಗಳಿಗೂ ಜನಾದೇಶ ದೊರೆಯದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀವು(ಬಿಜೆಪಿಯವರು )ಯಾವಾಗಲೂ ಅವೈಜ್ಞಾನಿಕ ಇಕ್ಕಟ್ಟಿಗೆ ಸಿಲುಕಿಸಲು ಹೋಗದೆ ಗುಣಾತ್ಮಕ ಸಲಹೆ ನೀಡಿ. ಆಡಳಿತ ಹಳಿ ತಪ್ಪಿದಾಗ ಟೀಕೆ ಮಾಡಿ ಎಂದು ಹೇಳಿದರು.
ಈಗಿನ ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಟೀಕಿಸುವ ನೀವು 2006ರಲ್ಲಿ ಆಗಿದ್ದು ಪವಿತ್ರ ಮೈತ್ರಿಯೇ ಎಂದು ಪ್ರಶ್ನಿಸಿದರು.
37 ಶಾಸಕರನ್ನು ಹೊಂದಿರುವ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ದೊರೆತಿದೆ ಎಂದು ಟೀಕಿಸುವುದನ್ನು ಉಲ್ಲೇಖಿಸಿದ ಅವರು, ಪಕ್ಷೇತರರಾಗಿ ಗೆದ್ದಿದ್ದ ಮಧುಕೋಡ ಅವರು ಜಾರ್ಖಂಡ್‍ನಲ್ಲಿ ಮುಖ್ಯಮಂತ್ರಿ ಆಗಲಿಲ್ಲವೆ. ಬಿಹಾರದಲ್ಲಿ ಚುನಾವಣಾ ಪೂರ್ವ ಹೊಂದಾಣಿಕೆಯನ್ನು ಮುರಿದು ರಾಜಕಾರಣ ಬೇರೆ ದಿಕ್ಕಿನಲ್ಲಿ ಸಾಗಲಿಲ್ಲವೆ? ಅದು ಪವಿತ್ರವಾದ ಮೈತ್ರಿಯೇ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಛೇಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸೋಲುವುದು ಮುಖ್ಯ. ನಾವು 150 ಸ್ಥಾನ ಗೆಲ್ಲುವುದು ಮುಖ್ಯವಲ್ಲ ಎಂದು ನೀವು ಹೇಳಿರಲಿಲ್ಲವೆ. ಅಸೂಯೆ ಎನ್ನುವುದು ಯಾರಿಗೂ ಒಳ್ಳೆಯದನ್ನು ತರುವುದಿಲ್ಲ ಎಂದು ಹೇಳಿದರು.
ರಾಜಕಾರಣದಲ್ಲಿ ಗೆರೆಗಳನ್ನು ಕಿತ್ತೆಸೆದು ಬಂದಿರುವ ನಮಗೆ ಸಾರ್ವಜನಿಕ ಜೀವನ ಮುಳ್ಳಿನ ಹಾಸಿಗೆ ಇದ್ದಂತೆ. 22 ಕ್ಯಾರೆಟ್‍ನಲ್ಲಿ ಆಭರಣ ಮಾಡಲು ಸಾಧ್ಯವಿಲ್ಲ. ಅದನ್ನು 22ಕ್ಕೆ, 20ಕ್ಕೆ ಇಳಿಸುತ್ತಾರೆ. ರೋಡ್‍ಗೋಲ್ಡ್ ಆದರೆ ಏನು ಎಂಬ ಚಿಂತೆ ಕಾಡುತ್ತಿದೆ. ವಿಧಾನಸಭೆಯಲ್ಲಿ ಮೂರು ಮಂದಿ ಮಾಜಿ ಮುಖ್ಯಮಂತ್ರಿಗಳು, ಒಬ್ಬರು ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರು ಇದ್ದಾರೆ. ಇದು ಸದನದ ಸೌಭಾಗ್ಯ. ಪ್ರಜಾಪ್ರಭುತ್ವದ ಸೌಂದರ್ಯ ಎಂದು ಬಣ್ಣಿಸಿದರು.
ಮೈತ್ರಿ ಸರ್ಕಾರವನ್ನು ಸಮರ್ಥಿಸಿ ಮಾತನಾಡುವ ಸಂದಿಗ್ಧತೆ ಬಂದಿದೆ ಎಂದ ಅವರು, ಏನೇ ಭಿನ್ನಾಭಿಪ್ರಾಯವಿದ್ದರೂ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಿವೆ ಎಂಬ ನೆಪವೊಡ್ಡಿ ಜವಾಬ್ದಾರಿಯಿಂದ ಜಾರಿಕೊಳ್ಳಬಾರದು ಎಂದು ರಾಮಸ್ವಾಮಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ