10 ದಿನಗಳ ಅಜ್ಞಾತವಾಸ; 12 ಬಾಲಕರು, ಫುಟ್‌ಬಾಲ್‌ ಕೋಚ್‌ ಜೀವಂತ: ಏನಿದು ಗುಹೆ ರಹಸ್ಯ!

ಚಿಯಾಂಗ್ರಾಯ್‌ (ಥಾಯ್ಲೆಂಡ್‌): ಪ್ರವಾಹ ಸೃಷ್ಟಿಯಾಗಿ ಗುಹೆಯ ಒಳಭಾಗದಲ್ಲಿ 10 ದಿನಗಳಿಂದ ಸಿಲುಕಿದ್ದ ಫುಟ್‌ಬಾಲ್‌ ತಂಡವೊಂದರ 12 ಬಾಲಕರು ಮತ್ತು ತರಬೇತುದಾರ ಜೀವಂತವಾಗಿರುವುದು ದೃಢಪಟ್ಟಿದೆ.

ಕಾರ್ಯಾಚರಣೆ ನೇತೃತ್ವದ ವಹಿಸಿರುವ ಬ್ರಿಟಿಷ್‌ ಗುಹಾ–ಮುಳುಗುತಜ್ಞರಾದ ಜಾನ್‌ ವೊಲಾಂಥೇನ್‌ ಮತ್ತು ರಿಕ್‌ ಸ್ಟಾಂಟನ್‌ ಬಾಲಕರನ್ನು ಪತ್ತೆ ಮಾಡಿ ಅವರೊಂದಿಗೆ ಆಪ್ತ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ.

ಇಂಗ್ಲಿಷ್‌ ಭಾಷೆಯಲ್ಲಿ ನಡೆಸಿರುವ ಅವರ ನಡುವಿನ ಸಂಭಾಷಣೆ ಹೀಗಿದೆ;

ರಕ್ಷಕ: ‘ಎಷ್ಟು ಜನ ಇದ್ದೀರಿ–13? ಅದ್ಭುತ’
‘ನೀವು ಇಲ್ಲಿ 10 ದಿನಗಳಿಂದ ಇದ್ದೀರ. ನೀವು ಬಹಳ ಗಟ್ಟಿಗರು’
ಬಾಲಕ: ಥ್ಯಾಂಕ್‌ ಯು
ಮತ್ತೊಬ್ಬ ಬಾಲಕ: ನಮಗೆ ಹೊಟ್ಟೆ ಹಸಿಯುತ್ತಿದೆ, ಊಟ ಬೇಕು. ಮೊದಲು ನಾವು ಇಲ್ಲಿಂದ ಹೊರ ಹೋಗಬೇಕು. ಯಾವಾಗ ಹೊರಗೆ ಹೋಗುವೆವು?
ರಕ್ಷಕ: ನನಗೆ ಅರ್ಥವಾಗುತ್ತೆ. ಆದರೆ, ಇವತ್ತೇ ಅಲ್ಲ. ನೀವಿನ್ನೂ ಮುಳುಗಿ ಏಳಬೇಕಿದೆ!

ನಮ್ಮೊಂದಿಗೆ ಇನ್ನೂ ಹಲವು ಮಂದಿ ರಕ್ಷಣೆ ಬರಲಿದ್ದಾರೆ. ಇಲ್ಲಿಂದ ಸುರಕ್ಷಿತವಾಗಿ ಹೊರಹೋಗಲು ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಥಾಯ್ಲೆಂಡ್‌ನ ನೌಕಾಪಡೆ ‘ಸೀಲ್‌’ ಸಿಬ್ಬಂದಿ ಕಾರ್ಯಾಚರಣೆ ಪ್ರಮುಖ ಪಾತ್ರವಹಿಸಿದ್ದಾರೆ.

ಥಾಯ್‌ ನೌಕಾಪಡೆ ಟಾರ್ಚ್‌ ಬೆಳಕಿನಲ್ಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಪ್ರಕಟಿಸಿದ್ದು, ಕೆಂಪು ಮತ್ತು ನೀಲಿ ಬಣ್ಣದ ಶರ್ಟ್‌ಗಳಲ್ಲಿರುವ ಬಾಲಕರು ಬಂಡೆಗಳ ಮೇಲೆ ನಿಂತು, ಕುಳಿತು ನೀರಿನಿಂದ ರಕ್ಷಣೆ ಪಡೆದಿರುವುದನ್ನು ಕಾಣಬಹುದಾಗಿದೆ.

ಗುಹೆಯ ಕೂಪದಿಂದ ಅವರನ್ನು ಸುರಕ್ಷಿತವಾಗಿ ಹೊರ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚಿಯಾಂಗ್‌ರಾಯ್ ಪ್ರಾಂತ್ಯದ ಗವರ್ನರ್‌ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

ಮುಳುಗುತಜ್ಞರು ತಜ್ಞರು ಗುಹೆಯ ಕಿರುದಾರಿಗಳಲ್ಲಿ ನುಸುಳಿ, ಮಂಜಿನಿಂದ ಆವೃತವಾದ ನೀರಿನಲ್ಲಿ ಇಳಿದು, ದಾಟಿ ಗುಹೆಯ ಪ್ರವೇಶದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಸೋಮವಾರ ರಾತ್ರಿ ಬಾಲಕರನ್ನು ಪತ್ತೆ ಮಾಡಿದ್ದಾರೆ.

10 ದಿನಗಳ ಹಿಂದೆ:

11ರಿಂದ 16 ವರ್ಷದ ವಯೋಮಾನದ ಫುಟ್‌ಬಾಲ್‌ ಆಟಗಾರರು ತರಬೇತುದಾರರೊಂದಿಗೆ ಪ್ರಸಿದ್ಧ ಪ್ರವಾಸಿ ತಾಣವಾದ ಉತ್ತರ ಥಾಯ್ಲೆಂಡ್‌ನ ಥಾಮ್ ಲುವಾಂಗ್ ಗುಹೆಯೊಳಗೆ ಶನಿವಾರ (ಜೂನ್‌ 23) ಪ್ರವೇಶಿಸಿದ್ದರು. ಅದೇ ಸಮಯದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಪ್ರವೇಶದ್ವಾರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಹಲವು ಕಿ.ಮೀ. ಉದ್ದದ ಪ್ರವಾಹ ‍ಪೀಡಿತ ಗುಹೆಯಲ್ಲಿ ಇಡೀ ತಂಡ ನಾಪತ್ತೆಯಾಗಿತ್ತು. ಈ ತಂಡದ ಕೋಚ್ ವಯಸ್ಸು 25 ವರ್ಷ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ