
ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಪೋರ್ಚುಗಲ್ ನಕೌಟ್ ಹಂತದಲ್ಲೇ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದ್ದು, ಇದೀಗ ತಂಡದ ನಾಯಕ ಮತ್ತು ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್ ಕನಸು ಭಗ್ನಗೊಂಡಿದೆ. ಅಷ್ಟು ಮಾತ್ರವಲ್ಲದೇ ರೊನಾಲ್ಡೋ ವಿಶ್ವಕಪ್ ಭವಿಷ್ಯದ ಮೇಲೂ ಶಂಕೆ ವ್ಯಕ್ತವಾಗುತ್ತಿದೆ.
ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡ 2-1 ಅಂತರದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ತಂಡದ ಸ್ಟಾರ್ ಆಟಗಾರ ರೊನಾಲ್ಡೋ ಗೋಲು ಗಳಿಸದೇ ಇದ್ದದ್ದು ಪೋರ್ಚುಗಲ್ ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಇನ್ನು ತಂಡದ ನಾಯಕ ರೊನಾಲ್ಡೋ ಮುಂದಿನ ವಿಶ್ವಕಪ್ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಾಗಿದ್ದು, ಮುಂದಿನ 2022ರ ವಿಶ್ವಕಪ್ ಟೂರ್ನಿ ಕತಾರ್ ನಲ್ಲಿ ನಡೆಯಲಿದೆ. ಆ ವೇಳೆ ರೊನಾಲ್ಡೋ 38ರ ಆಸುಪಾಸಿಗೆ ಜಾರಲಿದ್ದಾರೆ.
ಹೀಗಾಗಿ ಆ ವಯಸ್ಸಿನಲ್ಲಿ ರೊನಾಲ್ಡೋ ಫುಟ್ಬಾಲ್ ಆಡುವ ಸಾಮರ್ಥ್ಯದ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು. ಇದೇ ಕಾರಣಕ್ಕೆ ಇದು ರೊನಾಲ್ಡೋ ಪಾಲಿನ ಕೊನೆಯ ವಿಶ್ವಕಪ್ ಟೂರ್ನಿ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋರ್ಚುಗಲ್ ತಂಡದ ನಾಯಕ ರೊನಾಲ್ಡೋ, ಮುಂದಿನ ವಿಶ್ವಕಪ್ ಗೆ ಇನ್ನೂ ಸಾಕಷ್ಟು ಸಮಯವಿದೆ. ಆ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆದರೆ ವಿಶ್ವ ಫುಟ್ಬಾಲ್ ಕ್ಷೇತ್ರದಲ್ಲಿ ಪೋರ್ಚುಗಲ್ ತಂಡ ಖಂಡಿತಾ ಪ್ರಬಲ ತಂಡವಾಗಿ ಮುಂದುವರೆಯಲಿದೆ. ತಂಡದಲ್ಲಿ ಸಾಕಷ್ಟು ಯುವ ಪ್ರತಿಭೆಗಳಿದ್ದು ಭವಿಷ್ಯದ ದೃಷ್ಟಿಯಿಂದ ಅವರನ್ನು ತಂಡವನ್ನು ಮತ್ತಷ್ಟು ಬಲಿಷ್ಟ ಮಾಡಬೇಕಿದೆ ಎಂದು ರೊನಾಲ್ಡೋ ಹೇಳಿದ್ದಾರೆ.