ಬೆಂಗಳೂರು, ಜು.2-ವಿಶ್ವಮಾನ್ಯತೆ ಪಡೆದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ 2021ರ ಮಾರ್ಚ್ ವೇಳೆಗೆ 118 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಿದ್ದು,ಪ್ರಸ್ತುತ ದಿನವೊಂದಕ್ಕೆ 3.6ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದು, ಭವಿಷ್ಯದಲ್ಲಿ ಈ ಸಂಖ್ಯೆಯನ್ನು 20ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದ ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿ, ಬೆಂಗಳೂರು ಹೃದಯ ಭಾಗದಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಯೋಜಿಸುತ್ತಿದೆ. ಬಸ್ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯ, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಸ್‍ಗಳಲ್ಲಿ ಕ್ಲೋಸ್ಡ್ ಸಕ್ರ್ಯೂಟ್ ಕ್ಯಾಮೆರಾ, ಪ್ಯಾನಿಕ್ ಅಲಾರಾಂ ಹಾಗೂ ಮೊಬೈಲ್ ಆ್ಯಪ್‍ನಲ್ಲಿ ಎಸ್‍ಒಎಸ್ ಬಟನ್ ಒದಗಿಸಲು ಯೋಜಿಸಲಾಗಿದೆ.
ಸಾರ್ವಜನಿಕರಿಗೆ ಬೈಸಿಕಲ್ ಬಾಡಿಗೆಗೆ ನೀಡುವ ವ್ಯವಸ್ಥೆ ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲೂ ಇದನ್ನು ವಿಸ್ತರಿಸಲಾಗುತ್ತಿದೆ ಎಂದರು.
ವಿಶ್ವ ಮಾನ್ಯತೆ ಪಡೆದಿರುವ ಸಿಲಿಕಾನ್ ಸಿಟಿ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮೂಲಸೌಲಭ್ಯಗಳ ಕೊರತೆ ನೀಗಿಸುವುದು, ಸಂಚಾರ ದಟ್ಟಣೆ ನಿಯಂತ್ರಣ ವ್ಯವಸ್ಥೆಯನ್ನು ಶೀಘ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಾಗಿದೆ ಎಂದರು.
ಐಟಿ-ಬಿಟಿ ಕ್ಷೇತ್ರದಲ್ಲಿ ವಿಶ್ವ ನಾಯಕತ್ವ ವಹಿಸಿಕೊಂಡಿರುವ ಬೆಂಗಳೂರು ವಿಶ್ವದ ಡಿಜಿಟಲ್ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಈಗ ರಫ್ತಿನ ಮೂಲಕ 3 ಲಕ್ಷ ಕೋಟಿ ರೂ. ಹಾಗೂ ಭಾರತದ ಜೈವಿಕ ಉದ್ಯಮದ ಆದಾಯದ ಶೇ. 35ಕ್ಕಿಂತ ಹೆಚ್ಚಿನ ಕೊಡುಗೆ ನೀಡಿದೆ.
7 ಸಾವಿರ ನವೋದ್ಯಮಗಳ ಸ್ಥಾಪನೆ ಮೂಲಕ ಬೆಂಗಳೂರು ನವೋದ್ಯಮ ಕ್ಷೇತ್ರದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಸರ್ಕಾರ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಕರ್ನಾಟಕವು ದೇಶೀಯ ಪ್ರವಾಸಿಗರ ಆಗಮನದಲ್ಲಿ 5ನೇ ಸ್ಥಾನ ಹಾಗೂ ವಿದೇಶಿ ಪ್ರವಾಸಿಗರ ಆಗಮನದಲ್ಲಿ 11ನೇ ಸ್ಥಾನದಲ್ಲಿದ್ದು, ಇದನ್ನು ಪ್ರವಾಸೋದ್ಯಮ ನೀತಿಯನ್ವಯ ಭಾರತದ ಪ್ರವಾಸಿ ತಾಣಗಳ ಪೈಕಿ ಕರ್ನಾಟಕವನ್ನು ಮೊದಲೆರಡರ ಸ್ಥಾನಕ್ಕೆ ತರಲು ಹಾಗೂ ವಿಶ್ವದ ಪ್ರವಾಸಿ ತಾಣಗಳ ಪೈಕಿ 50ನೇ ಸ್ಥಾನದೊಳಗೆ ತರುವ ಗುರಿ ಹೊಂದಲಾಗಿದೆ ಎಂದರು.
ಕರ್ನಾಟಕ ಆರ್ಥಿಕ ಸ್ಥಿತಿ ದಕ್ಷತೆಯಿಂದ ನಿರ್ವಹಿಸುವುದರಲ್ಲಿ ಹೆಸರಾಗಿದ್ದು, ಇದನ್ನು ಮತ್ತಷ್ಟು ಉತ್ತಮಪಡಿಸಲು ವಿತ್ತೀಯ ಕ್ರೋಢೀಕರಣ ನಕ್ಷೆ ರೂಪಿಸಲು ನಾವು ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದರು.