ಬೆಂಗಳೂರು, ಜು.2-ವಿಧಾನಮಂಡಲದ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ಇಂದು ವಿಧಾನಸಭೆ ತುಂಬಿ ತುಳುಕುತ್ತಿತ್ತು. ರಾಜ್ಯಪಾಲ ವಿ.ಆರ್.ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನದ ಬಹುತೇಕ ಎಲ್ಲಾ ಸದಸ್ಯರು ಹಾಜರಿದ್ದರು.
ನಿಗದಿತ ಸಮಯಕ್ಕೆ ಸರಿಯಾಗಿ ರಾಜ್ಯಪಾಲರು ಆಗಮಿಸುತ್ತಿದ್ದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್ನ ಅಷ್ಟೂ ಸದಸ್ಯರು ಹಾಜರಾಗಿದ್ದರು. ವಿಧಾನಸಭೆಯ 222 ಹಾಗೂ ಪರಿಷತ್ನ 70ಕ್ಕೂ ಹೆಚ್ಚು ಸದಸ್ಯರು ಸದನದಲ್ಲಿ ಕಾಣಿಸಿಕೊಂಡರು.
ರಾಜ್ಯಪಾಲರ ಭಾಷಣ ಮುಗಿದ ಬಳಿಕ ಹೊಸ ಸಚಿವರು ಪ್ರತಿಪಕ್ಷದ ನಾಯಕರ ಸಾಲಿಗೆ ಬಂದು ಕುಶಲೋಪರಿ ವಿಚಾರಿಸಿದರು. ಮೊದಲು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಉಪ ನಾಯಕ ಗೋವಿಂದ ಕಾರಜೋಳ, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಮತ್ತಿತರರ ಜತೆ ಅನೌಪಚಾರಿಕ ಮಾತುಕತೆ ನಡೆಸಿದರು.
ತದನಂತರ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಶಾಸಕ ಮುನಿರತ್ನ ಸೇರಿದಂತೆ ಹಲವರು ಪ್ರತಿ ಪಕ್ಷದ ಸದಸ್ಯರ ಸಾಲಿಗೆ ಬಂದು ಕುಶಲೋಪರಿ ವಿಚಾರಿಸಿದರು. ಬಳಿಕ ಪ್ರತಿಪಕ್ಷದ ಸದಸ್ಯರು ಆಡಳಿತ ಪಕ್ಷದ ಸಾಲಿಗೆ ಬಂದು ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದರು. ಹೀಗೆ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ವಿಧಾನಸಭೆ ತುಂಬಿ ತುಳುಕುತ್ತಿತ್ತು.
Joint Session,Karnataka Legislative Assembly,Vidhana Soudha