ಬೆಂಗಳೂರು:ಜು-2: ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶಕ್ಕೆ ಚಾಲನೆ ದೊರೆಯಿತು.
ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ರಾಜ್ಯದಲ್ಲಿ ಸ್ಥಿರ ಮತ್ತು ಅಭಿವೃದ್ಧಿಪರ ಆಡಳಿತವನ್ನು ಹೊಂದಿರುವ ಸರ್ಕಾರವಿದ್ದು ಕಾನೂನು ಸುವ್ಯವಸ್ಥೆ ತೃಪ್ತಿಕರವಾಗಿದೆ. ರೈತರ ಹಿತ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು.
ಕೃಷಿ ಸಮುದಾಯದ ಸಂಕಷ್ಟಗಳನ್ನ ಕಡಿಮೆ ಮಾಡುತ್ತೇವೆ. ಬೆಳೆ ಹಾನಿಯಿಂದ ರೈತರು ಸಂಕಟ ಪಡದಂತೆ ಕ್ರಮ ಕೈಗೊಳ್ಳಲಾಗುವುದು. ಕೌಶಲ್ಯ ವಿಕಾಸಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ಶಿಕ್ಷಣದಲ್ಲೇ ಶಕ್ತಿ ಇದೆ ಎಂದು ನಮಗೆ ಅರಿವಿದೆ. ನಿರುದ್ಯೋಗಿ ಯುವಕರಿಗೆ ಕೌಶಲ್ಯ ಶಿಕ್ಷಣ ನೀಡಲಾಗುವುದು ಎಂದು ವಾಗ್ದಾನ ಮಾಡಿದರು.
ಆನ್ ಲೈನ್ನಲ್ಲಿಯೇ ಪಡಿತರ ಅರ್ಜಿ ಭರ್ತಿಗೆ ಯೋಜನೆ ಜಾರಿಯಲ್ಲಿದೆ. ಅಂಗನವಾಡಿಯಿಂದ ಮಕ್ಕಳ ಆರೋಗ್ಯ ವೃದ್ಧಿಗೆ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ.
ಪಾವಗಡದಲ್ಲಿ 2000 ಮೆಗಾ ವ್ಯಾಟ್ ಸೌರ ವಿದ್ಯುತ್ ಘಟಕ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ ರಾಜ್ಯಪಾಲರು, ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಗ್ಯಾಸ್ ಸಂಪರ್ಕ, ನದಿಗಳ ನೀರು ಗುಣಮಟ್ಟ ಕಾಪಾಡಲು ವೈಜ್ಞಾನಿಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಕ್ಫ್ ಮಂಡಳಿಯಿಂದ ಮುಸ್ಲಿಂ ಮಹಿಳೆಯರ ಅಭಿವೃದ್ಧಿಗೆ ಕ್ರಮ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಕ್ಲಾಸ್ ಹಮ್ಮಿಕೊಳ್ಳಲಾಗುವುದು ಎಂದು ಜಂಟಿ ಅಧಿವೇಶನ ಉದ್ದೇಶಿಸಿ ಗವರ್ನರ್ ಹೇಳಿದರು.
ಸುಮಾರು 19 ಪುಟಗಳ ಸುದೀರ್ಘ ಭಾಷಣವನ್ನು ರಾಜ್ಯಪಾಲ ವಿಆರ್ ವಾಲಾ ಅವರು ಮಾಡಿದರೂ ಕೂಡಾ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಾಲಮನ್ನಾದ ವಿಚಾರ ಭಾಷಣದಲ್ಲಿ ಪ್ರಸ್ತಾಪ ಆಗಿಲ್ಲ. ಆದರೆ ಪರೋಕ್ಷವಾಗಿ ರೈತರ ಸಾಲಮನ್ನಾದ ಬಗ್ಗೆ ಸುಳಿವು ನೀಡಿದೆ. ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತರ ಸಮಸ್ಯೆ ನಿವಾರಣೆಗೆ ನನ್ನ ಸರ್ಕಾರ ಬದ್ಧವಾಗಿದೆ. ಅಲ್ಲದೇ ರೈತರು ಇಸ್ರೇಲ್ ಮಾದರಿಯ ಕೃಷಿಯನ್ನು ಅನುಸರಿಸಬೇಕು. ಇದಕ್ಕೆ ಬೇಕಾದ ಪೂರಕ ವಾತಾವರಣವನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ಹೇಳಿದರು.
ಶಾಸಕರಿಗೆ ಕಿವಿಮಾತು ಹೇಳಿದ ರಾಜ್ಯಪಾಲರು, ಬಹುತೇಕ ಶಾಸಕರು ಹೊಸದಾಗಿ ಸದನ ಪ್ರವೇಶಿಸಿದ್ದೀರಿ. ಸುಮಾರು 100 ಸದಸ್ಯರು ಹೊಸದಾಗಿ ಆಯ್ಕೆಯಾಗಿ ಬಂದಿದ್ದೀರಿ. ಜಂಟಿ ಅಧಿವೇಶನಕ್ಕೆ ನಿಮಗೆಲ್ಲರಿಗೂ ಸ್ವಾಗತ ಕೋರುತ್ತೇನೆ. ಹೊಸ ಸದಸ್ಯರಿಗೆ ಅನುಭವಿ ಸದಸ್ಯರು ಮಾದರಿಯಾಗಬೇಕು ಎಂದು ಹೇಳಿದ್ದಲ್ಲದೆ, ಹೊಸ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಜನರ ರಕ್ಷಣೆಗೆ ಸರಕಾರ ನೂತನ ದಾರಿಯಲ್ಲಿ ಕೆಲಸ ಮಾಡಲಿದೆ. ಉತ್ತಮ ಕಾರ್ಯಕ್ರಮಗಳು ಜನರ ಹಿತ ಕಾಯಲಿದೆ ಎಂದರು.
ರೈತರ ರಕ್ಷಣೆಗಾಗಿ ಸರ್ಕಾರ ಆಧುನಿಕ ನೀತಿ ರೂಪಿಸಲಿದೆ. ಹಿಂದುಳಿದ ವರ್ಗ ಹಾಗೂ ಮಹಿಳೆಯರ ಕಲ್ಯಾಣಕ್ಕೆ ಬದ್ದವಾಗಿದೆ. ಯುವ ಜನತೆಗಾಗಿ ಕೌಶಲ್ಯಾಭಿವೃದ್ದಿ ಯೋಜನೆ ಮತ್ತು ನಿರುದ್ಯೋಗಿಗಳಿಗೆ ಹೆಚ್ಚು ಉದ್ಯೋಗ ಸೃಷ್ಟಿಸಲು ಕಟಿಬದ್ದವಾಗಿದೆ. ರೈತರಲ್ಲಿ ಮನವಿ ಮಾಡುವುದೇನೆಂದರೆ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು. ರೈತರಿಗೆ ಮುಂಗಾರಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
Governer VajuBhai Vala, Speech, Budget session