ಮುಖ್ಯಮಂತ್ರಿಯವರು ಸಾಲ ಮನ್ನಾ ಮಾಡುವುದು ಖಚಿತ – ಎಚ್.ಡಿ.ರೇವಣ್ಣ

ಹಾಸನ,ಜು.1 – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತು ಕೊಟ್ಟಂತೆ ಸಾಲ ಮನ್ನಾ ಮಾಡಲಿದ್ದಾರೆ. ಇದಲ್ಲಿ ಯಾವುದೇ ಅನುಮಾನ ಬೇಡ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 10 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೈದ್ಯಕೀಯ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ರೈತರ ಸಾಲಮನ್ನಾ ನಿಶ್ಚಿತ. ಬಜೆಟ್‍ನಲ್ಲಿ ಈ ಬಗ್ಗೆ ಘೋಷಣೆಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಹಾಸನಾಂಬ ವೈದ್ಯಕೀಯ ವಿದ್ಯಾಲಯದಲ್ಲಿ ಸುಮಾರು 750 ವಿದ್ಯಾರ್ಥಿಗಳಿದ್ದು, ಅದರಲ್ಲಿ 300 ವಿದ್ಯಾರ್ಥಿನಿಯರಿಗೆ ಅವಕಾಶವಾಗುವಂತೆ ವಸತಿ ನಿಲಯ ನಿರ್ಮಾಣವಾಗಲಿದೆ. ಇದಲ್ಲದೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ವಿಶೇಷ ವಸತಿ ನಿಲಯ ನಿರ್ಮಾಣ ಮಾಡಲಾಗುವುದು. ಒಟ್ಟಾರೆ 135 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ ಎಂದರು.
ಹಣಕಾಸು ಇಲಾಖೆಯು ಸಮ್ಮತಿ ಸೂಚಿಸಿದ್ದು, ಮೂರು ಹಂತಗಳಲ್ಲಿ ಹಣ ಬಿಡುಗಡೆಗೆ ಮನವಿ ಮಾಡಲಾಗಿದೆ. ಅದರಂತೆ ಈ ವರ್ಷ 50 ಕೋಟಿ ರೂ. ಒದಗಿಸಲು ಕೋರಿದೆ ಎಂದು ಸಚಿವ ರೇವಣ್ಣ ಹೇಳಿದರು.
ಶಿರಡಿಘಾಟ್ ರಸ್ತೆ ಕಾಮಗಾರಿ ಮುಗಿದಿದ್ದು , ತಾವು ಇನ್ನೊಂದು ಸುತ್ತಿನ ಪರಿಶೀಲನೆ ನಡೆಸಿದ ನಂತರ ಮುಂದಿನ 10-12ದಿನಗಳೊಳಗಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಶಾಸಕ ಪ್ರೀತಮ್ ಗೌಡ, ನಗರಸಭೆ ಅಧ್ಯಕ್ಷ ಡಾ.ಎಚ್.ಎಸ್.ಅನಿಲ್‍ಕುಮಾರ್, ಆಯುಕ್ತರಾದ ಪರಮೇಶ್ ಹಿಮ್ಸ ನಿರ್ದೇಶಕರಾದ ಡಾ.ರವಿಕುಮಾರ್, ಆಡಳಿತಾಧಿಕಾರಿ ಚಿದಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಂಕರ್, ಲೋಕೋಪಯೋಗಿ ಇಲಾಖಾ ಅಧೀಕ್ಷಕ ಇಂಜಿನಿಯರ್ ಡಾ.ರಾಜ್‍ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ