ಮೈಸೂರು,ಜು.1-ಇಂದು ಬೆಳ್ಳಂ ಬೆಳ್ಳಗೆ ಮೈಸೂರು ರೇಸ್ ಕೋರ್ಸ್ಗೆ ದಿಢೀರ್ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೇಸ್ಕೋರ್ಸ್ ಆವರಣದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಕೂಡಲೇ ತೆರವು ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೇಸ್ಕೋರ್ಸ್ ಆವರಣದಲ್ಲಿ 600ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳಿದ್ದು, ಅದನ್ನು ಮೂರು ತಿಂಗಳೊಳಗೆ ತೆರವುಗೊಳಿಸಲು ಸೂಚಿಸಿರುವುದಾಗಿ ತಿಳಿಸಿದರು .
ರೇಸ್ಕೋರ್ಸ್ ಸರ್ವೇ ನಂ.4ರ ವ್ಯಾಪ್ತಿಗೆ ಬರುತ್ತದೆ. ಇದು ಸರ್ಕಾರಿ ಜಾಗ. ಈ ಸ್ಥಳದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಹಾಗಾಗಿ ಇಲ್ಲಿ ಅನಧಿಕೃತವಾಗಿ ತಲೆಎತ್ತಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದರು.
ರೇಸ್ಕೋರ್ಸ್ನಲ್ಲಿ ಕುದುರೆಗಳನ್ನು ಓಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ರೇಸ್ಕೋರ್ಸ್ನಲ್ಲಿ ಕೇವಲ 110 ಕುದುರೆಗಳನ್ನುಇರಿಸಲು ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಈಗ 600 ಕುದುರೆಗಳು ಇದ್ದು ಒಂದು ಕುದುರೆಗೆ 3 ಮಂದಿಯಂತೆ 1800 ಸಿಬ್ಬಂದಿ ವಾಸಿಸುತ್ತಿದ್ದಾರೆ. ಇಲ್ಲಿ ನಿರ್ಮಿಸಿರುವ ಕಟ್ಟಡಗಳ ಅನಧಿಕೃತ ಎಂದು ಹೇಳಿದರು.
ರೇಸ್ಕೋರ್ಸ್ನಲ್ಲಿ 110 ಕುದುರೆಗಳನ್ನು ಹೊರತುಪಡಿಸಿ ಹೆಚ್ಚುವರಿ ಕುದುರೆಗಳನ್ನು ಈ ಕೂಡಲೇ ಸ್ಥಳಾಂತರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಮತ್ತೊಮ್ಮೆ ಈ ಅವ್ಯವಸ್ಥೆ ಕಂಡುಬಂದರೆ ನಿಮ್ಮನ್ನು ವರ್ಗಾವಣೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.