ಹೊಸದಿಲ್ಲಿ: ಹಲವು ವಾದ-ವಿವಾದಗಳ ನಡುವೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗಿ ಒಂದು ವರ್ಷ ಕಳೆದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ವ್ಯವಸ್ಥೆಯ ವರ್ಷಾಚರಣೆಯ ವೇಳೆ ಪ್ರಧಾನಿ ಮೋದಿ ಇಂದು ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.
ಜಿಎಸ್ಟಿ ಒಂದು ವರ್ಷ ಪೂರೈಸಿರುವ ವಿಶೇಷ ಸನ್ನಿವೇಶದಲ್ಲಿ ನಾನು ಭಾರತದ ಜನತೆಗೆ ಶುಭ ಕೋರುತ್ತೇನೆ. ಇದು ಸಹಕಾರಯುತ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆ ಹಾಗೂ ಟೀಮ್ ಇಂಡಿಯಾದ ಹುರುಪಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಜಿಎಸ್ಟಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಜಿಎಸ್ಟಿಯು ಭಾರತದ ಆರ್ಥಿಕತೆಯಲ್ಲಿ ಗ್ರೋತ್ (ಪ್ರಗತಿ), ಸಿಂಪ್ಲಿಸಿಟಿ (ಸರಳ), ಟ್ರಾನ್ಸ್ಫರೆನ್ಸಿ(ಪಾರದರ್ಶಕತೆ) ತಂದಿದೆ. ಅಲ್ಲದೆ ಔಪಚಾರಿಕತೆ, ಉತ್ಪಾದಕತೆಗೆ ಬಲ ತುಂಬಿದೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟು, ವ್ಯಾಪಾರವನ್ನು ಸರಾಗವಾಗಿಸಿದೆ ಎಂದು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಹಣಕಾಸು ಸಚಿವ ಪಿಯೂಶ್ ಗೋಯಲ್ ಸಹ ಟ್ವೀಟ್ ಮೂಲಕ ಶುಭಾಶಯ ಕೋರಿದ್ದು, ಜಿಎಸ್ಟಿ ಭಾರತದಲ್ಲಿನ ಪರಿವರ್ತಿತ ತೆರಿಗೆ ಸುಧಾರಣೆಯಾಗಿದೆ. ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ದೇಶದ ಪ್ರಗತಿಗೆ ಕಾರಣವಾಗಿದೆ. ಜನರಿಗೆ ಸರಳ ಹಾಗೂ ಆರ್ಥಿಕತೆಯಲ್ಲಿ ಪಾರದರ್ಶಕತೆ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಜೂನ್ 30ರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಿಎಸ್ಟಿ ಜಾರಿಗೊಳಿಸಿದ್ದರು. ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ಗುರಿಯೊಂದಿಗೆ ಎಲ್ಲಾ ತೆರಿಗೆಯನ್ನು ಏಕ ಗವಾಕ್ಷಿ ಪರಿಕಲ್ಪನೆ ಮೂಲಕ ಜಾರಿಗೊಳಿಸುವ ಉದ್ದೇಶ ಇಲ್ಲಿತ್ತು.