ಸಾಲಮನ್ನಾದ ಕ್ರೆಡಿಟ್‍ಗೆ ದೋಸ್ತಿಗಳ ಕಸರತ್ತು: ರೈತರ ಅಕೌಂಟ್‍ಗೆ ನೇರ ವರ್ಗಾವಣೆಗೆ ಪ್ಲಾನ್

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ –ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಾಲಮನ್ನಾ ವಿಚಾರವಾಗಿಯೇ ದಿನನಿತ್ಯವೂ ಸುದ್ದಿಯಾಗುತ್ತಿರುವುದು ತಿಳಿದ ವಿಷಯುವೇ, ಆದರೆ ಇಷ್ಟು ದಿನ ಸಾಲಮನ್ನಾ ಮಾಡೋದು ಹೇಗೆ ಅನ್ನೋದೇ ದೊಡ್ಡ ತಲೆಬಿಸಿಯಾಗಿತ್ತು. ಆದರೀಗ ಸಾಲಮನ್ನಾದ ಕ್ರೆಡಿಟ್ ವಿಚಾರವಾಗಿ ಸಮ್ಮಿಶ್ರ ಸರ್ಕಾರದ ದೋಸ್ತಿಗಳ ನಡುವೆ ಶೀತಲ ಸಮರ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಾಲಮನ್ನಾದ ಎಲ್ಲಾ ಕ್ರೆಡಿಟ್ ತಾವು ಪಡೆಯಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರಂತೆ. ಅದಕ್ಕಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಬಳಿ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಿದ್ದಾರೆ. ಅದರಂತೆ ರೈತರ ಅಕೌಂಟಿಗೆ ನೇರವಾಗಿ ಸಾಲಮನ್ನಾದ ಹಣ ಹಾಕಿ, ಅಲ್ಲಿಂದ ನೇರವಾಗಿ ಸಹಕಾರಿ ಬ್ಯಾಂಕ್‍ಗಳ ಅಕೌಂಟ್‍ಗೆ ಜಮೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

ಸಾಲ ಮಾಡಿದ್ದು ನಾವು, ಆದರೇ ನಮ್ಮ ಬ್ಯಾಕ್ ಖಾತೆಹಣ ಹಾಕಿ ಸಾಲ ತೀರಿಸಿದ್ದು ಕುಮಾರಸ್ವಾಮಿ ಸರ್ಕಾರ ಎನ್ನುವ ಭಾವನೆ ರೈತರಲ್ಲಿ ಮೂಡಿಸೋದು ಮುಖ್ಯಮಂತ್ರಿಯ ತಂತ್ರವಾಗಿದೆ. ಇಷ್ಟೇ ಅಲ್ಲ, ಸಾಲಮನ್ನಾ ವಿಚಾರದಲ್ಲಿ ಸಹಕಾರಿ ಬ್ಯಾಂಕುಗಳು ರೈತರಿಗೆ ಮೋಸ ಮಾಡದಂತೆ ತಡೆಯಲು ವಿಚಕ್ಷಣ ದಳವೊಂದನ್ನು ರಚಿಸಲು ನಿರ್ಧರಿಸಿದ್ದಾರೆ. ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳು ವಂಚಿಸಿದರೆ ಅಥವಾ ಸರಿಯಾಗಿ ಸ್ಪಂದಿಸದಿದ್ದಲ್ಲಿ ಈ ವಿಚಕ್ಷಣ ದಳ ರೈತರ ಪರ ನಿಲ್ಲಲಿದೆ.

ಈ ಮೂಲಕ ಕುಮಾರಸ್ವಾಮಿ ಒಬ್ಬರೇ ರೈತರ ಪರವಾಗಿ ಇರೋದು ಅನ್ನೋ ವೇವ್‍ ಅನ್ನು ಲೋಕಸಭೆ ಚುನಾವಣೆ ವೇಳೆಗೆ ಕ್ರಿಯೇಟ್ ಮಾಡಲು ಪ್ಲಾನ್ ರೂಪಿಸಲಾಗಿದೆ ಎಂಬ ವರದಿಯಾಗಿವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ಸವಾಲಾಗಿದ್ದ ಸಾಲಮನ್ನಾಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ) ಸಮ್ಮತಿ ನೀಡಿದೆ. ಆದರೆ ಸಂಪೂರ್ಣ ಸಾಲ ಬದಲಿಗೆ ಬೆಳೆ ಸಾಲಮನ್ನಾಕ್ಕೆ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಹೆಚ್. ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ್ ನೇತೃತ್ವದ ಕರಡು ಸಮಿತಿಯ ವರದಿ ಇಂದು ಸಮನ್ವಯ ಸಮಿತಿಗೆ ರವಾನೆಯಾಗಲಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮನ್ವಯ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಒಪ್ಪಿಗೆ ಸಿಕ್ಕರೆ ಅನುಷ್ಠಾನಕ್ಕೆ ಬರಲಿದೆ. ಇವತ್ತು ಸಿಎಂಪಿ ತೆಗೆದುಕೊಂಡ ನಿರ್ಧಾರ ಹೀಗಿದೆ.

ಸಿಎಂಪಿ ಶಿಫಾರಸು:
* ಸದ್ಯಕ್ಕೆ ಸಂಪೂರ್ಣ ಸಾಲಮನ್ನಾ ಇಲ್ಲ
* ಕೇವಲ ಬೆಳೆ ಸಾಲ ಮಾತ್ರ ಮನ್ನಾ
* ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ
* ಏಪ್ರಿಲ್ 1, 2009ರಿಂದ ಮೇ 31, 2018ರವರೆಗಿನ ಸಾಲ ಮನ್ನಾ
* ಗರ್ಭಿಣಿಯರಿಗೆ ಮಾಸಿಕ 6000 ಭತ್ಯೆ
* ಮಗು ಹುಟ್ಟುವ 3 ತಿಂಗಳು ಮುನ್ನ, ಹುಟ್ಟಿದ 3 ತಿಂಗಳ ನಂತರ ಭತ್ಯೆ
* ಸದ್ಯಕ್ಕೆ ವೃದ್ಧಾಪ್ಯ ವೇತನ ಹೆಚ್ಚಳ ಇಲ್ಲ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ