ಬೆಂಗಳೂರು, ಜೂ.23- ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸರ್ವಪಕ್ಷಗಳ ಸಭೆ ನಡೆಯಿತು.
ಕೇಂದ್ರ ಸರ್ಕಾರ ಇತ್ತೀಚೆಗೆ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಚಿಸಿರುವ ನಿರ್ವಹಣಾ ಮಂಡಳಿಯಿಂದ ರಾಜ್ಯಕ್ಕಾಗುವ ಸಾಧಕ-ಬಾಧಕಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.
ವಿಧಾನಸೌಧದಲ್ಲಿಂದು ನಡೆದ ಸಭೆಗೆ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಾಜ್ಯ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರು, ರಾಜ್ಯದ ಎಲ್ಲ ವಿಧಾನಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಎಲ್ಲ ಶಾಸಕರನ್ನು ಆಹ್ವಾನಿಸಲಾಗಿತ್ತು.
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಿದ್ದು, ಇದರಿಂದ ರಾಜ್ಯದ ರೈತರ ಬೆಳೆಗಳಿಗೆ ನೀರು ಬೇಕೆಂದರೆ 10 ದಿನಗಳು ಮುಂಚೆಯೇ ಮಂಡಳಿಗೆ ಮನವಿ ಸಲ್ಲಿಸಬೇಕು. ಇಂಥದ್ದೇ ಬೆಳೆಯನ್ನು ಬೆಳೆಯಬೇಕೆಂದು ಮಂಡಳಿ ಸೂಚಿಸುವುದರಿಂದ ರಾಜ್ಯದ ಹಕ್ಕು ಕಸಿದಂತಾಗಿದ್ದಲ್ಲದೆ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದರು.
ಕಾವೇರಿ ನದಿ ವಿವಾದದ ವಿಚಾರದಲ್ಲಿ ರಾಜ್ಯ ಯಾವ ನಿಲುವು ತಳೆಯಬೇಕು, ಕಾನೂನು ಹೋರಾಟ ನಡೆಸಬೇಕೆ, ರಾಜ್ಯದ ಹಾಗೂ ರೈತರ ಹಿತ ಯಾವ ರೀತಿ ಕಾಪಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.
ಸಭೆಯ ಆರಂಭದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ನಡೆದಿರುವ ಬೆಳವಣಿಗೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಈಗಾಗಲೇ ತಮಿಳುನಾಡು ಸರ್ಕಾರ ಮಂಡಳಿಗೆ ತಮ್ಮ ಪ್ರತಿನಿಧಿಗಳನ್ನು ನೇಮಕ ಮಾಡಿದೆ. ಈ ಹಂತದಲ್ಲಿ ರಾಜ್ಯಸರ್ಕಾರ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ಪಡೆಯಲು ಸರ್ವ ಪಕ್ಷಗಳ ನಾಯಕರ ಸಭೆ ಕರೆಯಲಾಗಿತ್ತು.
ಮಂಡಳಿ ರಚನೆಯಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ ಈಗಾಗಲೇ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಅಂತಾರಾಜ್ಯ ನದಿ ವಿವಾದ ಕಾಯ್ದೆ ಪ್ರಕಾರ ಸಂಸತ್‍ನಲ್ಲಿ ಚರ್ಚಿಸಿದ ನಂತರ ಮಂಡಳಿ ರಚನೆ ಮಾಡಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಚರ್ಚಿಸದೆ ಮಂಡಳಿ ರಚನೆ ಮಾಡಿದೆ. ಇದು ಸರಿಯಲ್ಲ ಎಂಬ ವಾದವನ್ನು ಈಗಾಗಲೇ ರಾಜ್ಯ ಸರ್ಕಾರ ಮಾಡಿದೆ.
ಮಂಡಳಿ ಸಭೆಯಲ್ಲಿ ಕೋರಂ ಮತ್ತು ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುವುದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ರಾಜ್ಯ ಪ್ರತಿನಿಧಿಸುವ ಪ್ರತಿನಿಧಿಯ ವಾದಕ್ಕೆ ಬೆಲೆ ಸಿಗದೆ ಹೋಗಬಹುದು ಎಂಬ ಸಂದೇಹವೂ ಉಂಟಾಗಿದೆ. ಸಂಸತ್ ಅಧಿವೇಶನದಲ್ಲಿ ಸಂಸದರು ಈ ವಿಚಾರವನ್ನು ಆದ್ಯತೆ ಮೇಲೆ ಪ್ರಸ್ತಾಪಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಸುಪ್ರೀಂಕೋರ್ಟ್‍ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆ, ಬೇಡವೆ ಎಂಬುದು ಸೇರಿದಂತೆ ಯಾವ ರೀತಿಯ ಕಾನೂನು ಹೋರಾಟ ನಡೆಸಬೇಕು ಎಂಬ ವಿಚಾರಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.