ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಲೋಪದೋಷ ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡಕ್ಕೆ ನಿರ್ದಾರ

 

ಬೆಂಗಳೂರು,ಜೂ.30-ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಲ್ಲಾಗಿರುವ ಲೋಪದೋಷ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಹೊಸದಾಗಿ ಮೂಲ ದಾವೆ ಹೂಡಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ಭಾಗಿಯಾಗಿ ರಾಜ್ಯದ ಪರವಾಗಿ ಪ್ರಸ್ತಾಪಿಸಲು ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಯಿತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್, ಎನ್.ಮಹೇಶ್, ಡಿ.ಸಿ.ತಮ್ಮಣ್ಣ, ಸಂಸದರಾದ ಸಿ.ಎಸ್.ಪುಟ್ಟರಾಜು, ಕೆ.ಎಚ್.ಮುನಿಯಪ್ಪ, ಪ್ರತಾಪ್‍ಸಿಂಹ, ವೀರಪ್ಪ ಮೊಯ್ಲಿ, ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಕುಪೇಂದ್ರರೆಡ್ಡಿ, ನಾಸೀರ್ ಹುಸೇನ್, ಶಾಸಕರಾದ ಅನಿಲ್ ಚಿಕ್ಕಮಾದು, ಶಿವಲಿಂಗೇಗೌಡ, ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ, ಬ್ರಿಜೇಶ್ ಕಾಳಪ್ಪ ಮತ್ತಿತರರು ಭಾಗವಹಿಸಿದ್ದರು.

ಎಲ್ಲಾ ಪಕ್ಷಗಳ ನಾಯಕರು ಸಲಹೆ ಸೂಚನೆ ನೀಡಿದರು. ಕಾಂಗ್ರೆಸ್ ಶಾಸಕರು ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಮಂಡಳಿ ರಚನೆಯಾಗಿದೆ. ನ್ಯಾಯಾಲಯ ಆದೇಶವನ್ನು ಗೌರವಿಸುವುದು ನಮ್ಮ ಕರ್ತವ್ಯ. ಆದರೆ ಮಂಡಳಿ ರಚನೆ ವೇಳೆ ವಿಧಿಸಲಾಗಿರುವ ನಿಯಮಗಳು ರಾಜ್ಯದ ಹಿತಕ್ಕೆ ಮಾರಕವಾಗಿವೆ.
ಕಾವೇರಿ ನದಿ ಪಾತ್ರದಲ್ಲಿರುವ ಅಣೆಕಟ್ಟುಗಳ ನೀರಿನ ಮಟ್ಟವನ್ನು 10 ದಿನಗಳಿಗೊಮ್ಮೆ ಪರಿಶೀಲಿಸಿ ನೀರು ಬಿಡುವ ನಿರ್ಧಾರ ತೆಗೆದುಕೊಳ್ಳುವ ಹಾಗೂ ಕಾವೇರಿ ನದಿ ಪಾತ್ರದ ರೈತರು ಯಾವ ಬೆಳೆ ಬೆಳೆಯಬೇಕೆಂಬ ಬಗ್ಗೆ ಮಂಡಳಿ ನಿರ್ಧರಿಸುವುದು ಸರಿಯಲ್ಲ. ಇದರ ಪಾಲನೆ ಕಷ್ಟಕರ. ಇದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ರಾಜ್ಯದಲ್ಲಿ ವಿರೋಧವಿದೆ. ನ್ಯಾಯಾಲಯದ ಆದೇಶವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಜು.2ರಂದು ನಡೆಯುವ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ಭಾಗವಹಿಸಿ ನಮಗಾಗಿರುವ ಅನ್ಯಾಯವನ್ನು ಪ್ರಸ್ತಾಪಿಸಬೇಕು.
ಮಳೆ ಬಂದರೆ ಅಣೆಕಟ್ಟುಗಳು ತುಂಬುತ್ತವೆ. ಆಗ ನೀರು ಬಿಡಲು ಆಕ್ಷೇಪವಿಲ್ಲ. ಆದರೆ ಮಳೆಯಾಗದೆ ಬರ ಪರಿಸ್ಥಿತಿ ಎದುರಾದಾಗ ನೀರು ಹಂಚಿಕೆ ಸೂತ್ರ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಸಂವಿಧಾನದ 131ರ ಕಲಂ 17ರ ಅನುಸಾರ ಅಂತರ್‍ರಾಜ್ಯ ನದಿ ವಿವಾದಗಳಲ್ಲಾಗುವ ಅನ್ಯಾಯವನ್ನು ಸರಿಪಡಿಸಲು ಮೂಲ ದಾವೆ ಹೂಡುವುದಕ್ಕೆ ರಾಜ್ಯಸರ್ಕಾರಕ್ಕೆ ಅಧಿಕಾರವಿದೆ. ಅದನ್ನು ಬಳಸಿಕೊಂಡು ನದಿ ವಿವಾದದ ವಿಷಯದಲ್ಲಿ ಹೊಸದಾಗಿ ದಾವೆ ಹೂಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾವೇರಿವಿಷಯದಲ್ಲಿ ಒಗ್ಗಟ್ಟಿನ ಹೋರಾಟ ಅಗತ್ಯ. ಸಂಸತ್ ಅಧಿವೇಶನಲ್ಲಿ ಪಕ್ಷಭೇದ ಮರೆತು ವಿಷಯ ಪ್ರಸ್ತಾಪಿಸಲಾಗುವುದು. ಕಾವೇರಿ ನಿರ್ವಹಣಾ ಮಂಡಳಿಯ ಲೋಪದೋಷಗಳು ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಪಕ್ಷಾತೀತವಾಗಿ ಹೋರಾಟ ನಡೆಸಲು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ