ಮಂಡ್ಯ:ಜೂ-30: ನಾಟಿ ಕೋಳಿ ಸಾಂಬಾರ್ ಜತೆ ಬಿಸಿ ಬಿಸಿ ಮುದ್ದೆ ಸವಿದರೆ ಅದರ ಮಜನೇ ಬೇರೆ. ಇದನ್ನು ಒಂದು ಸ್ಪರ್ಧೆಯನ್ನೇ ಮಾಡಿ ನೋಡಿದ್ರೆ ಹೇಗೆ. ಅದು ಗ್ರಾಮೀಣ ಸೊಗಡಿನಲ್ಲಿ. ಏನಿದು ವಿಚಿತ್ರ ಅಂದ್ಕೊಂಡ್ರಾ. ಇದು ವಿಚಿತ್ರವಲ್ಲ ವಿಶೇಷ. ಹೌದು. ಮಂಡ್ಯದಲ್ಲಿ ಇಂತದ್ದೊಂದು ವಿಶೇಷವಾದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಜಿಲ್ಲೆ ಕಸಬಾ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಹೈಕ್ಳು ತಂಡ ನಾಟಿಕೋಳಿ ಸಾಂಬಾರ್ ಜತೆ ಜಿಲ್ಲಾಮಟ್ಟದ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಆಯೋಜಿಸಿದ್ದಾರೆ.
ಜುಲೈ 01ನೇ ತಾರೀಖಿನಂದು ಮಧ್ಯಾಹ್ನ 1 ಗಂಟೆಗೆ ಮಂಗಲ ಗ್ರಾಮದ ಮಾರಮ್ಮನ ದೇವಾಲಯದ ಆವರಣದಲ್ಲಿ ಈ ಸ್ಪರ್ಧೆ ಆಯೋಜಿತವಾಗಿದ್ದು ಆಸಕ್ತರು 100 ರೂಪಾಯಿ ನೊಂದಣಿ ಶುಲ್ಕ ನೀಡಿ ಬಿಸಿ-ಬಿಸಿ ನಾಟಿ ಕೋಳಿ ಸಾರಿನ ಜೊತೆ ಹೊಟ್ಟೆ ತುಂಬಾ ರಾಗಿ ಮುದ್ದೆ ಉಣ್ಣಬಹುದು.
15 ನಿಮಿಷದಲ್ಲಿ ಯಾರು ಅತಿ ಹೆಚ್ಚು ರಾಗಿಮುದ್ದೆ ತಿನ್ನುತ್ತಾರೊ ಅವರಿಗೆ 5000 ರೂಪಾಯಿ ಬಹುಮಾನ, ಪಾರಿತೋಶಕದ ಜೊತೆಗೆ ‘ಜನತಾ ಟಾಕೀಸ್’ ನಿರ್ಮಿಸುತ್ತಿರುವ ‘ಆನೆಬಲ’ ಚಲನಚಿತ್ರದಲ್ಲಿ ನಟಿಸುವ ಅವಕಾಶವೂ ದೊರೆಯುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಕೆಲವು ನಿಬಂಧನೆಗಳನ್ನೂ ಇಡಲಾಗಿದೆ. ಮದ್ಯಪಾನ ಮಾಡಿ ಆಟಕ್ಕೆ ಕೂರುವಂತಿಲ್ಲ. ಮುದ್ದೆ ತಿನ್ನಲು 15 ನಿಮಿಷ ಮಾತ್ರ ಕಾಲಾವಕಾಶ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 1 ಗಂಟೆ ಮುಂಚೆ ನೂರು ರೂಪಾಯಿ ಹಣ ನೀಡಿ ನೊಂದಾವಣಿ ಮಾಡಿಕೊಳ್ಳಬೇಕು. ವ್ಯವಸ್ಥಾಪಕರ ನಿರ್ಣಯವೇ ಅಂತಿಮವಾಗಿದೆ.
If you win this ragi mudde eating contest, you might bag a role in a film too