ಸೂರತ್(ಗುಜರಾತ್): ಉಂಗುರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಭಾರಿ ಮಹತ್ವವಿದೆ. ಬೆರಳಿಗೆ ಬೇರೆ ಬೇರೆ ಹರಳುಗಳುಳ್ಳ ಉಂಗುರ ಧರಿಸಿದರೆ ಅದೃಷ್ಟ ಖುಲಾಯಿಸುತ್ತಂತೆ. ಇನ್ನು ಕ್ರಿಶ್ಚಿಯನ್ನರು ಉಂಗುರ ಬದಲಿಸುವ ಮುನ್ನ ಗೃಹಸ್ಥಾಶ್ರಮ ಸೇರಿದರೆ, ಭಾರತೀಯರು ಪರಸ್ಪರ ಉಂಗುರು ಬದಲಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಜೀವನಕ್ಕೆ ಅಡಿ ಇಡಲು ಅಣಿಯಾಗ್ತಾರೆ. ಹಾಗಾಗಿ ಉಂಗುರಕ್ಕೆ ಭಾರಿ ಮಹತ್ವ.
ಹೌದು ಇಂತಿಪ್ಪ ಒಂದು ಉಂಗುರ ಗಿನ್ನೆಸ್ ದಾಖಲೆ ಬರೆದಿದೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ 6,690 ವಜ್ರದ ಹರಳುಗಳುಳ್ಳ ಕಮಲದ ಆಕಾರ ಚಿತ್ತಾಕರ್ಷಕ ಉಂಗುರವನ್ನು ಸೂರತ್ನ ವಜ್ರಾಭರಣ ವ್ಯಾಪಾರಿಗಳಿಬ್ಬರು ತಯಾರಿಸಿ ದಾಖಲೆ ಬರೆದಿದ್ದಾರೆ.
ಈ ಚಿತ್ತಾಕರ್ಷಕ ಉಂಗುರ ಸುಮಾರು 58 ಗ್ರಾಂ ತೂಕ ಹೊಂದಿದೆ. ಇದರ ಒಟ್ಟಾರೆ ಬೆಲೆ ಬರೋಬ್ಬರಿ 28 ಕೋಟಿ ರೂಪಾಯಿಯಂತೆ. ಅತ್ಯಂತ ನಯನಾಜೂಕಿನ ಕುಸುರಿ ಕೌಶಲ್ಯ ಬಳಸಿ ತಯಾರಿಸಲಾಗಿದೆ. ವಿಶಾಲ್ ಅಗರ್‌ವಾಲ್ ಮತ್ತು ಖುಷ್ಬು ಅಗರ್‌ವಾಲ್ 6 ತಿಂಗಳು ಶ್ರಮವಹಿಸಿ ಈ ಉಂಗುರವನ್ನು ತಯಾರಿಸಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. ಸಣ್ಣ ಉಂಗುರದಲ್ಲಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ವಜ್ರದ ಹರಳುಗಳನ್ನು ಜೋಡಿಸಿದ್ದರಿಂದ ಇದು ‘ಮೋಸ್ಟ್ ಡೈಮಂಡ್ಸ್ ಸೆಟ್ ಇನ್ ಒನ್ ರಿಂಗ್’ ಎಂಬ ಹಿರಿಮೆಗೆ ಪಾತ್ರವಾಗಿದೆ.
18 ಕ್ಯಾರೆಟ್ ಚಿನ್ನದಲ್ಲಿ ಸಿದ್ಧಪಡಿಸಿ ಈ ಉಂಗುರವನ್ನು ತಯಾರಿಸಲಾಗಿದೆ. ಈ ಹಿಂದೆ ಜೈಪುರ ಮೂಲದ ಸಾವಿಯೋ ಜ್ಯುವೆಲ್ಲರಿ ಕಂಪನಿಯು ಒಂದೇ ಉಂಗುರದಲ್ಲಿ 3,827 ವಜ್ರದ ಹರಳುಗಳನ್ನು ಜೋಡಿಸಿದ್ದು ಈ ವರೆಗಿನ ದಾಖಲೆಯಾಗಿತ್ತು.