ಬೆಂಗಳೂರು,ಜೂ.30- ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆಯಾಗಲಿದೆ ಎಂಬ ಕೂಗು ಕೇಳಿಬರುತ್ತಿದ್ದು ಸಂಸದೆ ಶೋಭ ಕರಂದ್ಲಾಜೆ ಮುಂಚೂಣಿಯಲ್ಲಿದ್ದಾರೆ.
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಹಾಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸುವ ಬಗ್ಗೆ ಪರ, ವಿರೋಧ ಅಭಿಪ್ರಾಯಗಳು ಕೇಳಿಬಂದಿದೆ.
ಒಬ್ಬ ವ್ಯಕ್ತಿಗೆ ಪಕ್ಷದಲ್ಲಿ ಒಂದೇ ಹುದ್ದೆ ಎಂಬ ನಿಯಮದಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಯಡಿಯುರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತಿಗೊಳಿಸಿ ತೆರವಾಗಲಿರುವ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಆರ್‍ಎಸ್‍ಎಸ್ ಸಲಹೆ ನೀಡಿದೆ.
ಇತ್ತೀಚೆಗೆ ಅಹಮದಾಬಾದ್‍ಗೆ ತೆರಳಿದ್ದ ಯಡಿಯೂರಪ್ಪ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿದ ವೇಳೆ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾತುಕತೆ ನಡೆದಿದೆ.
ತಮ್ಮನ್ನು ಬದಲಾಯಿಸುವುದಾದರೆ ಅಧ್ಯಕ್ಷ ಸ್ಥಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೆಸರನ್ನು ಪರಿಗಣಿಸಬೇಕೆಂದು ಅಮಿತ್ ಷಾ ಮುಂದೆ ಬಿಎಸ್‍ವೈ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಕಾರ್ಯಕಾರಿಣಿ ಸಭೆಯಲ್ಲೂ ಇದೇ ವಿಷಯ ಚರ್ಚೆಯಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ , ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಹೆಸರುಗಳು ಪ್ರಸ್ತಾಪವಾಗಿವೆ.
ಇವರೆಲ್ಲರೂ ಆರ್‍ಎಸ್‍ಎಸ್ ಹಿನ್ನೆಲೆಯಿಂದ ಬಂದವರಾಗಿದ್ದು , ಪಕ್ಷ ಮತ್ತು ಸಂಘ ಪರಿವಾರದ ನಡುವೆ ಸಮನ್ವಯ ಸಾಧಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇರುವುದರಿಂದ ಈ ಹೆಸರುಗಳು ಪ್ರಸ್ತಾಪವಾಗಿವೆ.
ಬಿಎಸ್‍ವೈ ಇರಲಿ:
ಇನ್ನು ಕಾರ್ಯಕಾರಿಣಿಯಲ್ಲಿ ಹಾಲಿ ಅಧ್ಯಕ್ಷರಾಗಿರುವ ಯಡಿಯೂರಪ್ಪನವರೇ ಲೋಕಸಭೆ ಚುನಾವಣೆವರೆಗೂ ಮುಂದುವರೆಯಲಿ ಎಂಬುದು ಕೆಲ ಶಾಸಕರು ಮತ್ತು ಸಂಸದರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 104 ಸ್ಥಾನ ಗಳಿಸಲು ಯಡಿಯೂರಪ್ಪನವರ ಪಾತ್ರವೂ ಪ್ರಮುಖವಾಗಿದೆ. ಅದರಲ್ಲೂ ಮಧ್ಯ ಕರ್ನಾಟಕ, ಮುಂಬೈ, ಹೈದರಾಬಾದ್ ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿರುವ ವೀರಶೈವ ಸಮುದಾಯ ಬಿಜೆಪಿಗೆ ಬೆಂಬಲಿಸಿರುವುದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ.
ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆಗೆ ಕಾಂಗ್ರೆಸ್ ಕ್ರಮ ಕೈಗೊಂಡರೂ ಆ ಸಮುದಾಯ ಯಡಿಯೂರಪ್ಪನವರ ಕಾರಣದಿಂದ ದೂರ ಸರಿದಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಗಳಿಗೆ ಅವರ ನಾಯಕತ್ವದಲ್ಲೇ ಪಕ್ಷ ಮುಂದುವರೆಯಲಿ ಎಂಬ ಸಲಹೆಯನ್ನು ನೀಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾಯಿಸಿದರೆ ಪಕ್ಷವನ್ನು ಸಮರ್ಥವಾಗಿ ಮುನ್ನೆಡೆಸಿಕೊಂಡು ಹೋಗುವ ಜವಾಬ್ದಾರಿ ಯಾರಿಗೂ ಇಲ್ಲ. ಯಡಿಯೂರಪ್ಪನವರೇ ಇದ್ದರೆ ಅವರ ನಾಯಕತ್ವದಲ್ಲಿ ಎಲ್ಲರೂ ಒಗ್ಗೂಡಿ ಪಕ್ಷವನ್ನು ಸಂಘಟಿಸುತ್ತಾರೆ. ಲೋಕಸಭೆ ಚುನಾವಣೆವರೆಗೂ ನಾಯಕತ್ವ ಬದಲಾವಣೆ ಮಾಡಬಾರದೆಂಬ ಮನವಿಯೂ ಕೇಳಿಬಂದಿದೆ.
ಕೊಟ್ಟರೆ ಶೋಭಾರಿಗೆ ಕೊಡಿ:
ಒಬ್ಬ ವ್ಯಕ್ತಿ ಒಂದೇ ಹುದ್ದೆ ಎಂಬ ಪಕ್ಷದ ನಿಯಮವನ್ನು ಪಾಲಿಸಲು ನಾನು ಸಿದ್ದನಿದ್ದೇನೆ. ನಾನು ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿರುವುದರಿಂದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ಈಗಾಗಲೇ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶೋಭಾ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ವರಿಷ್ಠರ ಮೇಲೆ ಬಿಎಸ್‍ವೈ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಜುಲೈ ತಿಂಗಳಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಆಗಮಿಸಲಿದ್ದು , ರಾಜ್ಯಾಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷದಲ್ಲಿ ಕೈಗೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಲೋಕಸಭೆ ಚುನಾವಣೆವರೆಗೂ ಹೈಕಮಾಂಡ್ ಯಡಿಯೂರಪ್ಪನವರನ್ನೇ ಮುಂದುವರೆಸುವ ಬಗ್ಗೆ ರಾಷ್ಟ್ರೀಯ ನಾಯಕರು ಚಿಂತನೆ ನಡೆಸಿದ್ದಾರೆ.