ನವದೆಹಲಿ:ಜೂ-29: ಹವಾಮಾನ ಬದಲಾವಣೆಯಿಂದ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರಮುಖವಾಗಿ ಮಧ್ಯ ಭಾರತದಲ್ಲಿ ಇದರಿಂದ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ. 2050ರ ವೇಳೆಗೆ ಭಾರತದ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ಸಿಲುಕಲಿದೆ ಎಂದು ಹೇಳಿದೆ.
ಬದಲಾಗುತ್ತಿರುವ ಹವಾಮಾನದಿಂದಾಗಿ 2050ರ ವೇಳೆಗೆ ಮಧ್ಯಭಾರತದ ಭಾಗ, ವಿದರ್ಭ ಸೇರಿದಂತೆ ಅನೇಕ ಭಾಗಗಳಲ್ಲಿ ಜನರ ಆರ್ಥಿಕ ಸಾಮರ್ಥ್ಯ ಶೇ.10ರಷ್ಟು ಕುಸಿಯಲಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭಾರತದ ಜಿಡಿಪಿ ಮೇಲೆ ಪರಿಣಾಮ ಬೀರಲಿದ್ದು, ಸುಮಾರು 60 ಕೋಟಿ ಜನ ಜೀವನ, ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ವರ್ಲ್ಡ್ ಬ್ಯಾಂಕ್ ನಡೆಸಿದ ಅಧ್ಯಯನ ವರದಿಯಲ್ಲಿ ಇಂತಹ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಲಾಗಿದೆ.
ಭಾರತದ ಮಧ್ಯಭಾಗದಲ್ಲಿರುವ ಅನೇಕ ಜಿಲ್ಲೆಗಳಲ್ಲಿ ವಾರ್ಷಿಕ ಮಳೆ ಬೀಳುವ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ವಾರ್ಷಿಕ ಸರಾಸರಿ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಛತ್ತೀಸ್‌ಗಢ, ಮಧ್ಯಪ್ರದೇಶದ ಜಿಲ್ಲೆಗಳಲ್ಲಿ 2050ರ ವೇಳೆಗೆ ಜನರ ಆದಾಯದಲ್ಲಿ ಶೇ.9ರಷ್ಟು ಕಡಿತವಾಗುವ ಸಾಧ್ಯತೆ ಇದೆ.
ವಿದರ್ಭ ಭಾಗದಲ್ಲಿರುವ 10 ಜಿಲ್ಲೆಗಳು ಹವಾಮಾನ ವೈಪರೀತ್ಯದಿಂದ ತೊಂದರೆಗೆ ಒಳಗಾಗುವ ಪಟ್ಟಿಯಲ್ಲಿದೆ ಎಂದು ಅಧ್ಯಯನ ಹೇಳಿದೆ. ತಾಪಮಾನದಲ್ಲಿ ಏರಿಕೆಯಾಗುವುದನ್ನು ನಿಧಾನಗತಿಯ ನೈಸರ್ಗಿಕ ವಿಕೋಪ ಎನ್ನಲಾಗುತ್ತದೆ. ಇದರಿಂದ ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗುತ್ತದೆ ಎಂದು ಅರ್ಥ ಶಾಸ್ತ್ರಜ್ಞ, ಅಧ್ಯಯನದ ಪ್ರಮುಖರಲ್ಲಿ ಒಬ್ಬರಾದ ಮುತ್ತುಕುಮಾರ ಮಣಿ ಹೇಳಿದ್ದಾರೆ. ಕಳೆದ 50-60 ವರ್ಷದಲ್ಲಿ ದೇಶದ ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಸಮಸ್ಯೆಗಳು ಅಪಾರ ಎಂದು ಅವರು ಹೇಳಿದ್ದಾರೆ.
ಕೃಷಿ, ವಲಸೆ ಹಾಗೂ ಉತ್ಪಾದನಾ ವಲಯಕ್ಕೆ ಉಷ್ಣಾಂಶ ಏರಿಕೆಯಿಂದ ತೀವ್ರ ಹೊಡೆತ ಬೀಳಲಿದೆ. 2050ರ ವೇಳೆಗೆ ಅಂದಾಜು 60 ಕೋಟಿ ಜನರ ಜೀವನ ನಿರ್ವಹಣೆಗೆ ಹವಾಮಾನ ವೈಪರೀತ್ಯದಿಂದ ಸಮಸ್ಯೆಯಾಗಲಿದೆ. ವಾತಾವರಣದಲ್ಲಿ ಇಂಗಾಲದ ಪ್ರಮಾಣವೂ ಹೆಚ್ಚುತ್ತಿರುವುದರ ಪರಿಣಾಮವಾಗಿ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗತ್ತಿರುವುದರಿಂದ ಜನಸಾಮಾನ್ಯರ ಜೀವನ ಮಟ್ಟದಲ್ಲೂ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.
World Bank report,Climate Change, Could Shave Off 2.8% Of India’s GDP By 2050