ಬೆಂಗಳೂರು, ಜೂ.29- ಸದ್ಯದ ರಾಜಕೀಯ ಚರ್ಚಾ ಕೇಂದ್ರಬಿಂದುವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೌನದ ಹಿಂದಿನ ಮರ್ಮವೇನು..? ಅವರ ಮೌನ ಆಭರಣವೆ..? ಅಡಚಣೆಯೆ..? ಅಥವಾ ಮತ್ತೊಂದು ಯಾವುದಾದರೂ ರಾಜಕೀಯ ಭೂಮಿಕೆ ಸಿದ್ಧತೆಯೇ..? ಅಥವಾ ಅನಗತ್ಯ ಪ್ರಲಾಪಗಳಿಗೆ ಪ್ರತಿಕ್ರಿಯೆ ನಾನೇಕೆ ನೀಡಬೇಕು ಎಂಬ ನಿರ್ಲಿಪ್ತತೆಯೇ..? ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎನ್ನುವುದರ ಸೂಚನೆಯೇ..? ಅಥವಾ ಮೌನದ ಮೂಲಕ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುತ್ತಿರುವ ಪರಿಯೇ..? ಈ ಬಗ್ಗೆ ಅವರ ಬೆಂಬಲಿಗರು ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಪಕ್ಷದ ನಾಯಕರಾಗಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚು ಮಾತನಾಡುತ್ತಿಲ್ಲ,ಬಹುತೇಕ ಮೌನ ವಹಿಸಿದ್ದಾರೆ.
ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಹೊಸ ಸಚಿವರು ಆಯ್ಕೆಯಾದ ನಂತರ ಸಿದ್ದರಾಮಯ್ಯ ಅವರು ತಾವು ಗೆದ್ದು ಬಂದ ಕ್ಷೇತ್ರ ಬಾದಾಮಿ ಮತದಾರರಿಗೆ ಅಭಿನಂದನೆ ಸಲ್ಲಿಸಲು ತೆರಳಿದ್ದರು. ಐದು ದಿನಗಳ ಕಾಲ ಆ ಕ್ಷೇತ್ರದಲ್ಲಿ ಪ್ರವಾಸ ಶುರುವಿಟ್ಟುಕೊಂಡರು. ಇತ್ತ ಸಂಪುಟದಲ್ಲಿ ಸ್ಥಾನ ಸಿಗದವರು ಬಂಡಾಯವೆದ್ದರು. ಭಿನ್ನಮತ ಉಲ್ಬಣಗೊಂಡಿತು. ಆದರೂ ಸಿದ್ದರಾಮಯ್ಯನವರು ತುಟಿಕ್ ಪಿಟಿಕ್ ಎನ್ನಲಿಲ್ಲ.
ಬಂಡಾಯ ಭುಗಿಲೆದ್ದು ಬೀದಿ ರಂಪವಾಯಿತು. ಸಿದ್ದರಾಮಯ್ಯನವರ ಪರಮಾಪ್ತರಾದ ಎಂ.ಬಿ.ಪಾಟೀಲ್ ಅವರು ಪ್ರತ್ಯೇಕ ಸಭೆಗಳನ್ನು ನಡೆಸಿ ಬಂಡಾಯದ ಕಹಳೆ ಮೊಳಗಿಸಿದರು.
ಮತ್ತೊಬ್ಬ ಅವರ ಬೆಂಬಲಿಗರಾದ ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದರು. ಎಂ.ಬಿ.ಪಾಟೀಲ್ ಮನೆಯಲ್ಲಿ ಅತೃಪ್ತರು ಸಭೆ ನಡೆಸಿದರು. ಅವರ ಮನವೊಲಿಕೆಗೆ ಹಲವು ನಾಯಕರು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಎಂ.ಬಿ.ಪಾಟೀಲ್ ಅವರನ್ನು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಭೇಟಿ ಮಾಡಿ ಮಾತುಕತೆ ನಡೆಸಿದರು.
ಎಂ.ಬಿ.ಪಾಟೀಲ್ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೇ ಕರೆಸಿಕೊಂಡು ಮಾತನಾಡಬೇಕಾಯ್ತು. ಇಷ್ಟೆಲ್ಲ ನಡೆದರೂ ಸಿದ್ದರಾಮಯ್ಯನವರು ಏನೂ ಮಾತನಾಡಲಿಲ್ಲ. ಬಾದಾಮಿಯಲ್ಲಿ ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರಿಗೆ ನಿಮ್ಮ ದಮ್ಮಯ್ಯ, ನನ್ನನ್ನೇನೂ ಕೇಳಬೇಡಿ ಎಂದು ಕೈ ಮುಗಿದರು.
ಅಲ್ಲಿನ ಮತದಾರರು, ಪಕ್ಷದ ಮುಖಂಡರು ಆಯೋಜಿಸಿದ್ದ ಸಭೆಗಳಲ್ಲಿ ಭಾಗವಹಿಸಿ ಕೃತಜ್ಞತೆ ಸಲ್ಲಿಸಿ ಬೆಂಗಳೂರಿಗೆ ಹಿಂದಿರುಗಿದರು. ನಂತರ ಸಚಿವರಿಗೆ ಖಾತೆ ಹಂಚಿಕೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಚಿಕಿತ್ಸೆಗಾಗಿ ಎರಡು ವಾರಗಳ ಕಾಲ ಧರ್ಮಸ್ಥಳದ ಉಜಿರೆಯ ಮಂಜುನಾಥ ಪ್ರಕೃತಿ ಯೋಗ ಚಿಕಿತ್ಸಾ ಕೇಂದ್ರಕ್ಕೆ ತೆರಳಿದರು. ಯಾವುದೇ ಮಾತಿಲ್ಲ, ಕಥೆಯಿಲ್ಲ. ಒಂದು ವಾರದ ನಂತರ ಅವರನ್ನು ಭೇಟಿ ಮಾಡಲೆಂದು ತೆರಳಿದ ಶಾಸಕರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ ವಿಡಿಯೋ ತುಣುಕುಗಳು ವೈರಲ್ ಆಗಿ ರಾಜ್ಯದ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದವು.
ಅವರ ಮಾತುಗಳಿಗೆ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಆನಂತರ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಇನ್ನೂ ಹಲವು ಶಾಸಕರು, ಮಂತ್ರಿಗಳು, ಬೆಂಬಲಿಗರು, ವಿವಿಧ ಜಾತಿಗಳ ಮುಖಂಡರು ತೆರಳಿದರು. ಈ ಸಂದರ್ಭದಲ್ಲೂ ಅವರು ಲೋಕಾಭಿರಾಮವಾಗಿ ಆಡಿದ ಸರ್ಕಾರದ ಆಯಸ್ಸಿನ ಮಾತು ಮಾಧ್ಯಮಗಳಲ್ಲಿ ಬಿತ್ತರವಾಗಿ ವಿವಿಧ ಆಯಾಮಗಳಲ್ಲಿ ಚರ್ಚೆಯಾಯಿತು.
ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲೂ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಾವುದರ ಬಗ್ಗೆಯೂ ಕೂಡ ಅವರು ಪ್ರತಿಕ್ರಿಯೆ ನೀಡಲಿಲ್ಲ. ಮೌನಕ್ಕೆ ಶರಣಾದರು. ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಸೇರಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರುತ್ತಾರೆ ಎಂಬ ಮಾತುಗಳು ಕೇಳಿಬಂದವು. ಇತ್ತ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದರು.
ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇಲ್ಲಿ ರಾಜಕೀಯವಾಗಿ ನಾನು ಏನನ್ನೂ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.
ಅಲ್ಲಿನ ವೈದ್ಯರಿಗೆ, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೂ ಕೂಡ ಅಭಿನಂದನೆ ಸಲ್ಲಿಸಿ ಮಂಜುನಾಥ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಮಂಗಳೂರಿನ ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಅವರನ್ನು ಮಾತನಾಡಿಸಲು ಯತ್ನಿಸಿದರಾದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೂ ಮಾಧ್ಯಮಗಳಲ್ಲಿ ಮಾತ್ರ ಪುಂಖಾನುಪುಂಖವಾಗಿ ಸುದ್ದಿಗಳು ಹರಡುತ್ತಲೇ ಇದ್ದವು. ಸಿದ್ದರಾಮಯ್ಯನವರನ್ನು ಕಟ್ಟಿಹಾಕಲು ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆದಿದೆ. ಅವರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ಫರ್ಮಾನು ಹೊರಡಿಸಲಾಗಿದೆ ಎಂದು ಸುದ್ದಿಗಳು ಬಿತ್ತರಗೊಂಡವು.
ಇತ್ತ ಮನೆ ತಲುಪಿದ ಸಿದ್ದರಾಮಯ್ಯನವರನ್ನು ಮಾಧ್ಯಮಗಳು ಭೇಟಿಯಾಗಿ ಮಾತನಾಡಲು ಯತ್ನಿಸಿದರಾದರೂ ತುಟಿ ಬಿಚ್ಚಲಿಲ್ಲ. ಅತ್ತ ಧರ್ಮಸ್ಥಳದಲ್ಲಿ ಅವರನ್ನು ಭೇಟಿ ಮಾಡಿ ಬಂದ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕೂಡ ಸಿದ್ದರಾಮಯ್ಯನವರ ಪರವಾಗಿ ದನಿ ಎತ್ತಿ ಗುಡುಗಿದ್ದರು. ಸರ್ಕಾರಕ್ಕೆ ನೇರವಾಗಿಯೇ ಎಚ್ಚರಿಕೆ ನೀಡಿದ್ದರು.ಹಲವು ಬೆಂಬಲಿಗರು ಕೂಡ ಸಿದ್ದರಾಮಯ್ಯನವರ ಪರವಾಗಿ ದನಿ ಎತ್ತಿ ಸಿದ್ದರಾಮಯ್ಯನವರನ್ನು ನಿರ್ಲಕ್ಷಿಸಿದರೆ ಅಪಾಯ ಎಂಬ ಎಚ್ಚರಿಕೆಯನ್ನೂ ಕೂಡ ರವಾನಿಸಿದರು.
ಮಾಜಿ ಮುಖ್ಯಮಂತ್ರಿ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಪ್ರತಿಕ್ರಿಯೆ ಕೊಟ್ಟಿಲ್ಲ. ಮಾತನಾಡದೆ ಮೌನ ವಹಿಸಿದ್ದರು. ಈ ಮೌನಕ್ಕೆ ಕಾರಣವೇನು? ಇದರ ಹಿಂದಿನ ಮರ್ಮವೇನು ಎಂಬುದು ಗೊತ್ತಾಗುತ್ತಿಲ್ಲ.
ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಕಾಂಗ್ರೆಸ್ ವರಿಷ್ಠರಾದ ಖರ್ಗೆ ಅವರಿಗೆ ಸೂಚಿಸಿದೆ. ಅವರು ನಾಳೆ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ. ಇತ್ತ ಸಿದ್ದರಾಮಯ್ಯನವರ ಆಪ್ತರನ್ನು ಕೇಳಿದರೆ ಏನೂ ಆಗಿಲ್ಲ, ಮಾಧ್ಯಮಗಳಲ್ಲಿ ಬರುವ ಊಹಾಪೆÇೀಹ ಸುದ್ದಿಗಳಿಗೆ ಅವರು ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ. ಅನಗತ್ಯವಾಗಿ ಮಾಡುವ ಸುದ್ದಿಗಳಿಗೆ ನಾವೇಕೆ ಪ್ರತಿಕ್ರಿಯೆ ನೀಡಬೇಕೆಂದು ಅವರು ಹೇಳುತ್ತಿದ್ದಾರೆ. ಇಷ್ಟು ಬಿಟ್ಟರೆ ಇನ್ನೇನೂ ಇಲ್ಲ ಎನ್ನುತ್ತಾರೆ. ಯಾವುದು ಸತ್ಯ… ಯಾವುದು ಮಿಥ್ಯ…