ಬೆಂಗಳೂರು, ಜೂ.29- ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕನಾಗಿ ಮಾಜಿ ಸಚಿವ ಹಾಗೂ ಹಾಲಿ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪಕ್ಷದ ಕಚೇರಿಯಲ್ಲಿಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಪಕ್ಷದ ಪ್ರಮುಖರು ಚರ್ಚೆ ನಡೆಸಿದ್ದು, ಬಹುತೇಕರು ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಹಾಲಿ ವಿಧಾನಪರಿಷತ್‍ನ ಉಪನಾಯಕರಾಗಿರುವ ಕೆ.ಬಿ.ಶಾಣಪ್ಪ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯಿತು. ಆದರೆ ಅವರು ಆಗಸ್ಟ್‍ನಲ್ಲಿ ನಿವೃತ್ತಿಯಾಗುತ್ತಿರುವುದರಿಂದ ಶ್ರೀನಿವಾಸ್ ಪೂಜಾರಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಪಕ್ಷ ಬಂದಿದೆ.
ಈ ಬಗ್ಗೆ ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ ಇಂದು ಸಂಜೆ ಅಥವಾ ನಾಳೆಯೊಳಗೆ ಅಧಿಕೃತವಾಗಿ ಘೋಷಣೆಯಾಗಲಿದೆ.
ಕೋಟಾ ಶ್ರೀನಿವಾಸ್ ಪೂಜಾರಿ ಜೊತೆಗೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮತ್ತೋರ್ವ ಸದಸ್ಯರಾದ ಆಯನೂರು ಮಂಜುನಾಥ್ ಹಾಗೂ ಅರುಣ್ ಶಹಪುರ್ ಹೆಸರುಗಳು ಕೂಡ ಕೇಳಿಬಂದವು.
ಹಿರಿತನ, ಪಕ್ಷ ನಿಷ್ಠೆ ಹಾಗೂ ಕರಾವಳಿ ಭಾಗಕ್ಕೆ ಯಾವುದಾದರೊಂದು ಪ್ರಮುಖ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಅವರ ಹೆಸರನ್ನು ಅಖೈರುಗೊಳಿಸಲಾಗಿದೆ.
ಕೋಟಾ ಶ್ರೀನಿವಾಸ್ ಪೂಜಾರಿ ಅವರು ಈ ಹಿಂದೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರಲ್ಲದೆ ಯಾವುದೇ ವಿಷಯದ ಬಗ್ಗೆ ಮಹತ್ವ ಅರಿತು ಮಾತನಾಡುವ ಚಾಕಚಕ್ಯತೆವುಳ್ಳವರಾಗಿದ್ದಾರೆ.
ಪ್ರಚಲಿತ ವಿದ್ಯಮಾನಗಳು ಹಾಗೂ ಯಾವುದೇ ವಿಷಯದ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆಸಿ ಮಾತನಾಡುವ ಕಲೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಸಹಜವಾ ಪ್ರತಿಪಕ್ಷದ ನಾಯಕನ ಸ್ಥಾನ ಒಲಿದಿದೆ.
ಉಳಿದಂತೆ ಆಯನೂರು ಮಂಜುನಾಥ್ ಹೆಸರು ಪರಿಗಣನೆಗೆ ಬಂದಿತು. ಆದರೆ ಈಗಾಗಲೇ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿರುವುದರಿಂದ ಸರ್ಕಾರದ ಎರಡು ಪ್ರಮುಖ ಸ್ಥಾನಗಳು ಒಂದೇ ಜಿಲ್ಲೆ ಮತ್ತು ಒಂದೇ ಸಮುದಾಯಕ್ಕೆ ನೀಡಿದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.
ಅರುಣ್ ಶಹಪುರ್ ಕೂಡ ಲಿಂಗಾಯಿತ ಸಮುದಾಯಕ್ಕೆ ಸೇರಿರುವುದರಿಂದ ಕೊನೆ ಕ್ಷಣದಲ್ಲಿ ಈ ಸ್ಥಾನ ಕೈ ತಪ್ಪಿದೆ ಎಂದು ತಿಳಿದುಬಂದಿದೆ.