ರಸ್ತೆಗುಂಡಿ ಮುಚ್ಚುವುದು ಸೇರಿದಂತೆ ನಗರದ ಎಲ್ಲ ಸಮಸ್ಯೆಗಳನ್ನೂ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ : ಬಿಬಿಎಂಪಿ ಆಯುಕ್ತ ಮಂಜುನಾಥ್

 

ಬೆಂಗಳೂರು, ಜೂ.29- ನಗರದ ಕಸದ ಸಮಸ್ಯೆ ನಿವಾರಣೆ, ರಸ್ತೆಗುಂಡಿ ಮುಚ್ಚುವುದು ಸೇರಿದಂತೆ ನಗರದ ಎಲ್ಲ ಸಮಸ್ಯೆಗಳನ್ನೂ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ವರ್ಗಾವಣೆಗೊಂಡಿದ್ದ ಮಂಜುನಾಥ್ ಪ್ರಸಾದ್ ಅವರು ಮತ್ತೆ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದರು.
ಸರ್ಕಾರ ನನ್ನ ಮೇಲೆ ಭರವಸೆಯಿಟ್ಟು ಮತ್ತೆ ಬಿಬಿಎಂಪಿ ಆಯುಕ್ತರನ್ನಾಗಿ ನಿಯೋಜನೆ ಮಾಡಿದೆ. ಆ ಭರವಸೆಯನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೇಯರ್ ಜಿ.ಸಂಪತ್‍ರಾಜ್ ಅವರ ಮಾರ್ಗದರ್ಶನದಲ್ಲಿ ಶ್ರಮ ವಹಿಸಿ ನಗರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಬಿಬಿಎಂಪಿಯಲ್ಲಿ ಸಾಕಷ್ಟು ಕೆಲಸ ಬಾಕಿ ಇದೆ. ಆ ಎಲ್ಲ ಕೆಲಸಗಳನ್ನೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಅವರು ವಿವರಿಸಿದರು.
ಎರಡನೆ ಬಾರಿಗೆ ಬಿಬಿಎಂಪಿ ಆಯುಕ್ತರಾಗಿ ನಿಯೋಜನೆಗೊಂಡ ಮಂಜುನಾಥ್ ಪ್ರಸಾದ್ ಅವರಿಗೆ ಮೇಯರ್ ಸಂಪತ್‍ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಮತ್ತಿತರ ಸದಸ್ಯರು ಶುಭ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ