ಬೆಂಗಳೂರು, ಜೂ.29- ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಅಂತಿಮ ಸ್ವರೂಪ ನೀಡಲು ಇಂದು ಕೆಪಿಸಿಸಿ ಕಚೇರಿಯಲ್ಲಿ ಪ್ರಮುಖ ನಾಯಕರ ಮಹತ್ವದ ಸಭೆ ನಡೆಯಿತು.
ಹಲವಾರು ದಿನಗಳಿಂದ ವಿಶ್ರಾಂತಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಭೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ರಚನೆಯ ಸಮಿತಿಯ ಮುಖ್ಯಸ್ಥರಾದ ಎಂ.ವೀರಪ್ಪಮೊಯ್ಲಿ, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಅವರು ಸಭೆ ನಡೆಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಸಿದ್ದಗೊಳಿಸಿದ್ದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಕರಡನ್ನು ಪರಿಶೀಲನೆ ನಡೆಸಿ ಅಂತಿಮ ಸ್ವರೂಪ ನೀಡಿದ್ದಾರೆ.
ಸಂಜೆ ಕುಮಾರಕೃಪದಲ್ಲಿ ನಡೆಯಲಿರುವ ಕರಡು ಸಮಿತಿಯ ಸಭೆಯಲ್ಲಿ ಎರಡೂ ಪಕ್ಷಗಳು ತಮ್ಮ ತಮ್ಮ ಕಾರ್ಯಕ್ರಮಗಳನ್ನು ಮಂಡಿಸಿ ಚರ್ಚಿಸುವ ಮೂಲಕ ಅಂತಿಮಗೊಳಿಸಲಿದ್ದಾರೆ. ಜು.1ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ಕರಡು ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.