ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ – ಅಜಂಖಾನ್

ಲಖ್ನೋ, ಜೂ.29- ಅಮರ ಪ್ರೇಮಿಗಳ ಪಾಲಿಗೆ ಮಧುರ ಸಂಕೇತ ಎಂದೇ ಗುರುತಿಸಿಕೊಂಡಿರುವ ವಿಶ್ವವಿಖ್ಯಾತ ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಅಜಂಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಾಜ್‍ಮಹಲ್ ಕೆಡವಲು ಮುಂದಾಳತ್ವ ವಹಿಸಿದರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇದಕ್ಕೆ 10ರಿಂದ 20 ಸಾವಿರ ಮುಸ್ಲಿಂ ಯುವಕರು ಬೆಂಬಲ ನೀಡುವುದಾಗಿ ಹೇಳಿದ್ದಾರೆ. ತಾಜ್‍ಮಹಲ್ ಕೆಡವಲು ಮೊದಲು ಯೋಗಿ ಆದಿತ್ಯನಾಥ್ ಹಾರೆ ಹಾಕಿದರೆ ಅದಕ್ಕೆ ನಾನು ಕೈ ಜೋಡಿಸುತ್ತೇನೆ. ಅದು ಶಿವನ ದೇವಾಲಯ ಎನ್ನುವುದಾದರೆ ಮುಖ್ಯಮಂತ್ರಿಗಳು ಕೆಡವಲು ಇನ್ನು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಾನು ಅನೇಕ ಬಾರಿ ಯೋಗಿ ಆದಿತ್ಯನಾಥ್ ಅವರಿಗೆ ತಾಜ್‍ಮಹಲ್ ಧ್ವಂಸ ಮಾಡಲು ಒತ್ತಾಯ ಮಾಡಿದ್ದೆ. ಆದರೆ ಅವರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗಲಾದರೂ ಇದನ್ನು ಸಕಾರಾತ್ಮಕವಾಗಿ ಪರಿಗಣಿಸಲಿ ಎಂದು ಮನವಿ ಮಾಡಿದ್ದಾರೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಅಜಂ ಖಾನ್ ಯಾವಾಗಲೂ ಒಂದು ಹೆಜ್ಜೆ ಮುಂದೆ. ಈ ಹಿಂದೆ ರಾಷ್ಟ್ರಪತಿ ಭವನ, ಸಂಸತ್, ಕೆಂಪು ಕೋಟೆಯನ್ನು ಕೂಡ ಬ್ರಿಟಿಷರು ಭಾರತದಲ್ಲಿ ಬಿಟ್ಟು ಹೋಗಿರುವ ಗುಲಾಮಗಿರಿಯ ಸಂಕೇತ ಎಂದು ಬಾಂಬ್ ಸಿಡಿಸಿದ್ದರು. ಈ ಹಿಂದೆ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರು.
ತಾಜ್‍ಮಹಲ್‍ನ್ನು ವಿಶ್ವಸಂಸ್ಥೆಯು ಭಾರತದ ಐತಿಹಾಸಿಕ ತಾಣವೆಂದು ಪರಿಗಣಿಸಿದೆ. ಜಗತ್ತಿನ ಕೆಲವೇ ಅದ್ಭುತಗಳಲ್ಲಿ ಇದು ಕೂಡ ಒಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ