ಸಚಿವ ಸ್ಥಾನದಿಂದ ವಂಚಿತರಾದ ಕಾಂಗ್ರೆಸ್ ನಾಯಕರಿಂದ ಸಿಎಂ ಭೇಟಿ

 

ಬೆಂಗಳೂರು,ಜೂ.29-ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಉಭಯ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಿಲ್ಲ. ಸರ್ಕಾರದ ಅಂಗಪಕ್ಷವಾದ ಕಾಂಗ್ರೆಸ್‍ನಲ್ಲಿನ ಅತೃಪ್ತಿ ಅಸಮಾಧಾನ ತಣ್ಣಗಾಗದೆ ರಾಜ್ಯ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಸನ್ನಿವೇಶಗಳು ಎದುರಾಗುತ್ತಿವೆ.
ಸಚಿವ ಸ್ಥಾನದಿಂದ ವಂಚಿತರಾದ ಕಾಂಗ್ರೆಸ್‍ನ ಹಲವು ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಪ್ರತಿದಿನ ಒಬ್ಬರಲ್ಲ ಒಬ್ಬ ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಡಾ.ಸುಧಾಕರ್ ಅವರು ಪ್ರತ್ಯೇಕವಾಗಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹೀಗಾಗಿ ಅತೃಪ್ತ ಶಾಸಕರ ಮೇಲಿನ ಹಿಡಿತ ಕಾಂಗ್ರೆಸ್ ನಾಯಕರಿಗೆ ಕಡಿಮೆಯಾಯಿತೆ ಎಂಬ ಸಂದೇಹ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ಪಕ್ಷದ ನಾಯಕರಿಗಿಂತ ಹೆಚ್ಚಾಗಿ ಮುಖ್ಯಮಂತ್ರಿಯನ್ನೇ ಅತೃಪ್ತ ಶಾಸಕರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿರುವುದು ಆ ಪಕ್ಷಕ್ಕೂ ಮುಜುಗರವನ್ನು ಉಂಟು ಮಾಡುತ್ತಿದೆ. ಈ ನಡುವೆ ಸರ್ಕಾರದ ಅಂಗಪಕ್ಷಗಳ ನಡುವೆ ಸಮನ್ವಯತೆ ಸಾಧಿಸಲು ಉಭಯ ಪಕ್ಷಗಳ ನಾಯಕರು ನಿರಂತರ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ