ಲೋಕಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ: ಮಾಜಿ ಮೇಯರ್ ಜಿ.ಪದ್ಮಾವತಿ

 

ಬೆಂಗಳೂರು, ಜೂ.29-ನಗರದಲ್ಲಿ ಬೊಗಸ್ ಮತದಾರರು ಹೆಚ್ಚಾಗಿದ್ದು ಲೋಕಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಮಾಜಿ ಮೇಯರ್ ಜಿ.ಪದ್ಮಾವತಿ ಪಾಲಿಕೆ ಸಭೆಯಲ್ಲಿಂದು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಮೀರಿದೆ. ನಕಲಿ ಮತದಾರರು ಹೆಚ್ಚಾಗಿದ್ದಾರೆ. ಖಾಲಿ ನಿವೇಶನಗಳಲ್ಲೂ ಮತದಾರರಿದ್ದಾರೆ ಎಂದು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಹೇಳಿದರು.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಂತರ ಬಿಬಿಎಂಪಿ ಚುನಾವಣೆ ಬರಲಿದೆ. ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಖಾಲಿ ನಿವೇಶನದಲ್ಲಿರುವ ಮತದಾರರನ್ನು ಕೈಬಿಡಲು ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ನಕಲಿ ಮತದಾರರನ್ನು ಕೈಬಿಡಬೇಕಾದರೆ ಅರ್ಹರನ್ನು ಪಟ್ಟಿಗೆ ಸೇರಿಸಲು ಅವಕಾಶ ಮಾಡಿಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು, ಮನೆಯಲ್ಲಿದ್ದವರನ್ನು ಮಾತ್ರ ಸೇರಿಸಬೇಕು. ಬೀಗ ಹಾಕಿದ ಮನೆಯವರನ್ನು ಖಾಲಿ ಸೈಟ್‍ನ ಮತದಾರರನ್ನು ತೆಗೆದು ಹಾಕಬೇಕು ಎಂದು ಹೇಳಿದರು.
ಈ ವೇಳೆ ಸಿಬ್ಬಂದಿ ಮಾತ್ರ ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಗುಂಡಣ್ಣ ಮಾತನಾಡಿ, ನಕಲಿ ಮತದಾರರನ್ನು ಕಿತ್ತು ಹಾಕಲು ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೆಲ್ಲ ಆಲಿಸಿದ ಮೇಯರ್ ಸಂಪತ್‍ರಾಜ್ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ