
ವಾಷಿಂಗ್ಟನ್, ಜೂ.29-ಭಾರತವು ಸಾಧಿಸಿರುವ ಅಧಿಕ ಪ್ರಗತಿ ದರದ ಸುಸ್ಥಿರತೆಯನ್ನು ಮುಂದುವರಿಸಲು ಅದು ಮೂರು ಪ್ರಮುಖ ಹೆಜ್ಜೆಗಳನ್ನು ಅನುಸರಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇಂದು ಸಲಹೆ ಮಾಡಿದೆ. ಬ್ಯಾಂಕಿಂಗ್ ವಲಯ ಸುಧಾರಣೆಗಳು, ವಿತ್ತ ಸಮಗ್ರತೆ ನಿರ್ವಹಣೆ ಮುಂದುವರಿಸುವಿಕೆ ಮತ್ತು ಜಿಎಸ್ಟಿ ಸರಳೀಕರಣ ಮತ್ತು ಕ್ರಮಬದ್ದತೆ ಹಾಗೂ ಸುಧಾರಣೆಗಳ ಮೇಲೆ ನವೀಕೃತ ಉತ್ತೇಜನ-ಇವು ಐಎಂಎಫ್ ಭಾರತಕ್ಕೆ ನೀಡಿರುವ ಮೂರು ಮಹತ್ವದ ಸಲಹೆಗಳಾಗಿವೆ.
ಭಾರತದ ಆರ್ಥಿಕ ಬೆಳವಣಿಗೆ ದರವು 2017-18ನೇ ಹಣಕಾಸು ಸಾಲಿನ ನಾಲ್ಕನೇ ತೈಮಾಸಿಕ ಅವಧಿಯಲ್ಲಿ ಶೇ.7.7ರಷ್ಟಿತ್ತು. ಅದಕ್ಕೂ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಅದು ಶೇ 7ರಷ್ಟಿತ್ತು.
2018-19ನೇ ವಿತ್ತೀಯ ವರ್ಷದಲ್ಲೂ ಇದು ಚೇತರಿಕೆ ಹಾದಿಯಲ್ಲೇ ಮುಂದುವರಿಯುತ್ತದೆ ಹಾಗೂ ಈ ಸಾಲಿನಲ್ಲಿ ಶೇ.7.4ರಷ್ಟು ಹಾಗೂ 2019-20ರಲ್ಲಿ ಅದು ಶೇ.7.6ರಷ್ಟು ವೃದ್ದಿಯಾಗುತ್ತದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಐಎಂಎಫ್ನ ಮಾಹಿತಿ ನಿರ್ದೇಶಕ ಗೇರ್ರಿ ರೈಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.