ಬೆಂಗಳೂರಿಗೆ ಮಾತ್ರ ಮೀಸಲಾಗಿರುವ ಚಲನಚಿತ್ರೋತ್ಸವಗಳು ಹಾಗೂ ಸಿನಿಮಾಸಕ್ತರ ಕ್ಲಬ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ: ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಜೂ-29: ಬೆಂಗಳೂರಿಗೆ ಮಾತ್ರ ಮೀಸಲಾಗಿರುವ ಚಲನಚಿತ್ರೋತ್ಸವಗಳು ಹಾಗೂ ಸಿನಿಮಾಸಕ್ತರ ಕ್ಲಬ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವುದು ಮತ್ತು ಸಿನಿಮಾಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೊರತರುವುದು ತಮ್ಮ ಗುರಿಯಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.

ಪ್ರಾಧ್ಯಾಪಕ ವೃತ್ತಿಯಿಂದ ಸಿನಿಮಾ ರಂಗಕ್ಕೆ ಕಾಲಿಟ್ಟು ಮೂರು ದಶಕಗಳ ಅನುಭವ ಪಡೆದಿರುವ ನಾನು ಚಲನಚಿತ್ರ ರಂಗದ ವಿವಿಧ ಕ್ಷೇತ್ರಗಳಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಸಹ ಅನುಭವವನ್ನು ಪಡೆದಿದ್ದೇನೆ. ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಚಿತ್ರೋತ್ಸವಗಳನ್ನು ಹಾಗೂ ಸಿನಿಮಾಸಕ್ತರ ಕ್ಲಬ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಕ್ಲಬ್‍ಗಳನ್ನು ಸಂಪರ್ಕಿಸಿ ಅವರ ಸಹಕಾರದೊಂದಿಗೆ ಅಲ್ಲಿ ಸಹ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಾರಂಭಿಸುವುದರ ಮುಖಾಂತರ ಅಲ್ಲಿನ ಚಿತ್ರ ರಸಿಕರಿಗೂ ಸಹ ಅವಕಾಶ ಕಲ್ಪಿಸಲು ಯೋಜಿಸಲಾಗುತ್ತಿದೆ.

ಕನ್ನಡ ಚಲನಚಿತ್ರದ ಇತಿಹಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪುಸ್ತಕಗಳು ಪ್ರಕಟವಾಗಿದ್ದು, ಇತ್ತೀಚಿನ ಚಲನಚಿತ್ರ ರಂಗದ ಬೆಳವಣಿಗೆ ಹಾಗೂ ಪ್ರಸ್ತುತ ಚಲನಚಿತ್ರ ರಂಗದ ಸ್ಥಿತಿಗತಿ ಕುರಿತು ಪುಸ್ತಕಗಳನ್ನು ಹೊರತರಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ.

ಕನ್ನಡದಲ್ಲಿ ಸಿನಿಮಾದ ವಿವಿಧ ವಿಭಾಗಗಳನ್ನು ಕುರಿತ ಉತ್ತಮ ಪುಸ್ತಕಗಳ ಕೊರತೆ ಸಾಕಷ್ಟು ಇದೆ. ಬರೆಯುವವರು ಹಾಗೂ ಅನುವಾದಿಸುವವರು ಬಹಳ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಕೆಲವು ಉತ್ತಮ ಕೃತಿಗಳ ಅನುವಾದ ಅಗತ್ಯವಾದರೂ, ಕನ್ನಡದಲ್ಲಿ ಸ್ವತಂತ್ರ ಕೃತಿ ರಚನೆಗಳು ಬೇಕಾಗಿವೆ. ಪ್ರಬಲ ಮಾಧ್ಯಮವಾದ ಚಲನಚಿತ್ರ ಕುರಿತ ಬರಹಗಳು ಬೇರೆ ಬೇರೆ ಹಂತಗಳಲ್ಲಿ ಪಠ್ಯ ಪುಸ್ತಕಗಳಾಗಬೇಕಾಗಿದೆ. ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಂತಗಳಲ್ಲಿ ಚಲನಚಿತ್ರದ ಮಹತ್ವದ ಸಮಾಜಮುಖಿಯಾದ ತಾಂತ್ರಿಕ ವಿಚಾರಗಳು ಪ್ರಾತಿನಿಧಿಕವಾಗಿ ಪಠ್ಯಗಳಾಗಬೇಕು. ಈ ಕುರಿತು ಶಿಕ್ಷಣ ಇಲಾಖೆ ಹಾಗೂ ವಿಶ್ವ ವಿದ್ಯಾನಿಲಯಗಳೊಂದಿಗೆ ಚರ್ಚಿಸಲಾಗುವುದು.

ನಮ್ಮ ಕನ್ನಡ ಚಲನಚಿತ್ರರಂಗವು 3 ವಿಭಿನ್ನ ನೆಲೆಗಳಲ್ಲಿ ಪ್ರವಹಿಸುತ್ತಾ ಸಾಗಿದೆ. ಹೊಸ ಅಲೆಯಚಿತ್ರಗಳ ಪರಂಪರೆಯನ್ನು ಹುಟ್ಟು ಹಾಕಿ, ವಿಶ್ವದ ಗಮನ ಸೆಳೆದು, ಇಂದಿಗೂ ಅದೇ ಬದ್ಧತೆ, ನಂಬಿಕೆಯಿಂದ ಸಿನಿಮಾ ಸೃಷ್ಟಿಸುವ ಒಂದು ಜಾಡು, ಎರಡನೆಯದು ಅದ್ದೂರಿಯಾದ ತಾಂತ್ರಿಕ ಸಿಬ್ಬಂದಿಗಳಿಂದ ಮನರಂಜನೆಯನ್ನು ಕೇಂದ್ರ ಪ್ರಜ್ಞೆಯನ್ನಾಗಿರಿಸಿಕೊಂಡು ಮಾರುಕಟ್ಟೆಯನ್ನು ವಿಸ್ತರಿಸುತ್ತಿರುವ , ವಾಣಿಜ್ಯ ಕೇಂದ್ರಗಳ ಚಿತ್ರಗಳ ಜಾಡು, ಇವೆರಡರ ನಡುವೆ ಸಂಚರಿಸುವ ಮಧ್ಯಮ ಮಾರ್ಗದ ಚಿತ್ರಗಳು, ಅಲ್ಲದೆ, ಮಕ್ಕಳ ಚಿತ್ರಗಳು, ಕನ್ನಡದ ಸೋದರ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಮತ್ತು ಬಂಜಾರ ಭಾಷೆಯ ಚಿತ್ರಗಳು, ಹೀಗೆ ಹಲವು ಉಪನದಿಗಳು ಸೇರಿ ಕನ್ನಡ ಸಿನಿಮಾ ಎಂಬ ಮಹಾನದಿ ಹಲವು ಅಡೆತಡೆಗಳ ನಡುವೆಯೂ ಮೈದುಂಬಿ ಪ್ರವಹಿಸುತ್ತಿದೆ ಎಂದು ತಿಳಿಸಿದರು.

ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾಗುವ ಮುಂಚಿನಿಂದಲೂ ನನ್ನನ್ನು ಕಾಡುತ್ತಿರುವ ಒಂದು ಕೊರಗು ಎಂದರೆ, ರಾಜಧಾನಿ ಬೆಂಗಳೂರು ಮತ್ತು ಬೆಂಗಳೂರಿನ ಆಚೆಗೆ ಇರುವ ಗ್ರಾಮೀಣ ಜಗತ್ತಿನ ನಡುವೆ ಇರುವ ಆಳವಾದ ಕಂದರ. ಪ್ರಜಾಸತ್ತೆಯ ಪ್ರಮುಖ ಆಶಯವೇ ವಿಕೇಂದ್ರೀಕರಣ. ಈ ವಿಕೇಂದ್ರೀಕರಣ ಬರಿಯ ರಾಜಕೀಯ ವ್ಯವಸ್ಥೆಗೆ ಮಾತ್ರ ಸೀಮಿತವಲ್ಲ. ಸಾಂಸ್ಕøತಿಕವಾಗಿಯೂ ವಿಕೇಂದ್ರೀಕರಣವಾಗಬೇಕಾಗಿದೆ.

ಕೆಲವು ಉತ್ತಮ ಚಿತ್ರಗಳು ಬೆಂಗಳೂರಿಗೆ ಹೆಚ್ಚೆಂದರೆ ಮೈಸೂರಿನವರಿಗೆÉ ಮಾತ್ರ ಸೀಮಿತವಾಗಿರುತ್ತದೆ. ಇದಕ್ಕೆ ಕಾರಣ ಮೊದಲನೆಯದು ಪ್ರದರ್ಶನಕ್ಕೆ ಅವಕಾಶವಿಲ್ಲದಿರುವುದು, ಇನ್ನೊಂದೆಡೆ ಸದಭಿರುಚಿಯ ಪ್ರೇಕ್ಷಕರನ್ನು ಹೆಚ್ಚು ಸಂಖ್ಯೆಯಲ್ಲಿ ಹುಟ್ಟುಹಾಕಲಾಗದ ವೈಫಲ್ಯ. ಅಕಾಡೆಮಿಯ ಮೂಲ ಉದ್ದೇಶಗಳಲ್ಲಿ ಸದಭಿರುಚಿಗೆ ನೀರೆರೆದು ಪ್ರೋತ್ಸಾಹಿಸುವುದು. ಈ ಕಾರ್ಯವನ್ನು ಯಶಸ್ವಿಗೊಳಿಸಲು ಪುಟ್ಟ ಪುಟ್ಟ ಚಿತ್ರ ಸಮಾಜಗಳು, ನಾಡಿನೆಲ್ಲೆಡೆ ಬೇಕು. ಕರ್ನಾಟಕ ನಾಲ್ಕು ವಿಭಾಗಗಳಲ್ಲಿ ಕೆಲವು ಕ್ರಿಯಾಶೀಲ ಚಿತ್ರ ಸಮಾಜಗಳಿವೆ. ಕೆಲವು ಪುಟ್ಟ ಊರುಗಳಲ್ಲಿ ವೈಯಕ್ತಿಕ ನೆಲೆಯಲ್ಲಿ ಸದಭಿರುಚಿಯ ಸಿನಿಮಾ ಕೃಷಿ ಮಾಡುತ್ತಿರುವ ಮತ್ತು ನೋಡುತ್ತಿರುವ ವ್ಯಕ್ತಿಗಳಿದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸಿ, ಪ್ರತಿ ಜಿಲ್ಲೆಯಲ್ಲ್ಲೂ ಒಂದು ಕ್ರಿಯಾಶೀಲ ಚಿತ್ರ ಸಮಾಜವನ್ನು ಹುಟ್ಟು ಹಾಕಬೇಕೆನ್ನುವುದು ನನ್ನ ಗುರಿ ಎಂದರು.

ಚಲನಚಿತ್ರ ಅಕಾಡೆಮಿಗೆ ಸರ್ಕಾರ, ನಂದಿನಿ ಬಡಾವಣೆಯಲ್ಲಿ ವಿಶಾಲವಾದ ಕಟ್ಟಡವೊಂದನ್ನು ನೀಡಿದೆ. ಸ್ವಂತ ಕಟ್ಟಡವಿರುವುದರಿಂದ ಇಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಲು ಅವಕಾಶವಿದೆ. ಇದೇ ಕಟ್ಟಡದಲ್ಲಿರುವ 500 ಆಸನಗಳಿರುವ ಚಿತ್ರಮಂದಿರ ಅಪೂರ್ಣವಾಗಿದೆ. ಈ ಚಿತ್ರಮಂದಿರವನ್ನು ಸಜ್ಜುಗೊಳಿಸಲು ಆದ್ಯತೆ ನೀಡಲಾಗುವುದು ಎಂದರು.

ಕಟ್ಟಡದಲ್ಲಿರುವ ವಿಶಾಲವಾದ ಆವರಣದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು. ಈ ಭಂಡಾರದಲ್ಲಿ ಲೈಬ್ರರಿ, ಚಲನಚಿತ್ರ ಸಿ.ಡಿ.ಗಳ ಸಂಗ್ರಹ, ಚಲನಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಆಕರಗಳನ್ನು ಒಳಗೊಂಡಿರುತ್ತದೆ ಹಾಗೂ ಸುಮಾರು 20 ಮಂದಿ ಕುಳಿತು ಸಿನಿಮಾ ವೀಕ್ಷಿಸಬಹುದಾದ ಸೌಲಭ್ಯವನ್ನು ಒಳಗೊಂಡಿರುವಂತೆ ರೂಪಿಸುವ ಉದ್ದೇಶವಿದೆ. ಇದು ಸಿನಿಮಾ ಕುರಿತು ಸಂಶೋಧನೆ ಮಾಡುವವರಿಗೆ ಅನುಕೂಲವಾಗಲಿದೆ. ಈ ರೀತಿಯ ಚಲನಚಿತ್ರ ಭಂಡಾರ ಸ್ಥಾಪನೆಗೆ ಈಗಾಗಲೇ ಸರ್ಕಾರದ ಆದೇಶವಾಗಿದ್ದು, ಅದನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದರು.
ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುತ್ತಿರುವ “ಬೆಂಗಳೂರು ಅಂತರರಷ್ಟ್ರೀಯ ಚಲನಚಿತ್ರೋತ್ಸವ” ಕ್ಕೆ ನಿಗದಿತ ದಿನಾಂಕವನ್ನು ಗೊತ್ತುಪಡಿಸಲು ಯತ್ನಿಸಲಾಗುವುದು. ಬೆಂಗಳೂರು ಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಹೊಂದಲು ಅದನ್ನು ಇನ್ನಷ್ಟ ಅರ್ಥಪೂರ್ಣವಾಗಿಸಲು ಮಾಡಬೇಕಾದ ಕೆಲಸವನ್ನು ಆರಂಭಿಸಲು ಉದ್ದೇಶಿಸಿದ್ದೇನೆ ಎಂದರು.
ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಇತರೆ ರಾಜ್ಯಗಳಲ್ಲೂ ಈ ರೀತಿಯ ಚಿತ್ರೋತ್ಸವನ್ನು ಏರ್ಪಡಿಸಲಾಗುವುದು. ಕರ್ನಾಟಕ ನಾಲ್ಕು ವಿಭಾಗಗಳ ಕೇಂದ್ರದಲ್ಲೂ ಮಿನಿ ಚಲನಚಿತ್ರೋತ್ಸವವನ್ನು ಆಚರಿಸುವ ಉದ್ದೇಶವಿದೆ ಎಂದ ಅವರು ಸಾಧಕರೊಂದಿಗೆ ಸಂವಾದ ನಡೆಸುವ ಬೆಳ್ಳಿ ಹೆಜ್ಜೆ, ಬೆಳ್ಳಿ ಸಿನಿಮಾ – ಬೆಳ್ಳಿ ಮಾತು ಮುಂತಾದ ನಿಯತ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಲಾಗುವುದು ಎಂದರು.

ಯಾವುದೇ ಅಧಿಕಾರವನ್ನು ರಚನಾತ್ಮಕವಾದ ಚಟುವಟಿಕೆಗಳಿಗೆ ಬಳಸಬಹುದು ಎಂಬದು ನನ್ನ ಗಾಢ ನಂಬಿಕೆ. ಅಧಿಕಾರ ಶಾಶ್ವತ ಎಂಬ ಭ್ರಮೆಯೂ ನನಗಿಲ್ಲ. ಅಧಿಕಾರ ನಶ್ವರ ಎಂಬ ವಿರಕ್ತಿಯೂ ನನಗಿಲ್ಲ. ನನಗೆ ಸಿಕ್ಕಿರುವ ಈ ಅವಕಾಶವನ್ನು ಸೂಕ್ತ ಸಲಹೆಗಳನ್ನು ಎಲ್ಲಾ ಮೂಲಗಳಿಂದ ಸ್ವೀಕರಸಿ ಸದ್ಬಳಕೆ ಮಾಡಿಕೊಂಡು ಕೆಲವಾದರೂ ಬದಲಾವಣೆ ತರಬಹುದು ಎಂಬ ಆತ್ಮವಿಶ್ವಾಸ ನನ್ನದಾಗಿದೆ ಎಂದು ಅವರು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಮಾತನಾಡಿ ಕನ್ನಡ ಚಲನಚಿತ್ರರಂಗಕ್ಕೆ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರ ಕೊಡುಗೆ ಅಪಾರ, ಅವರೊಬ್ಬ ಬಹುಮುಖ ಪ್ರತಿಭೆಯಾಗಿದ್ದು ಚಲನಚಿತ್ರದ ಹಲವು ವಿಭಾಗಗಳಲ್ಲಿ ಅನುಭವವುಳ್ಳವರು, ಅವರಂತಹ ಸಾಧಕರು ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರಾಗಿದ್ದು ಚಲನಚಿತ್ರರಂಗದ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಹೇಳಿದರು.

ನಾಗತಿಹಳ್ಳಿಯವರ ನೇತೃತ್ವದಲ್ಲಿ ಅಕಾಡೆಮಿಯಿಂದ ಹಮ್ಮಿಕೊಳ್ಳುವ ಉತ್ತಮ ಕಾರ್ಯಗಳಿಗೆ ಇಲಾಖೆಯಿಂದ ಸಂಪೂರ್ಣ ನೆರವನ್ನು ನೀಡಲಾಗುವುದು. ಅವರಿಂದ ಉತ್ತಮ ಕಾರ್ಯಗಳನ್ನು ನೀರಿಕ್ಷಿಸುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ಅವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ