
ಬೆಂಗಳೂರು,ಜೂ.29- ಕಾಂಗ್ರೆಸ್ ಪಕ್ಷದಲ್ಲಿ ಯುವ ಶಾಸಕರಿಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯರ ಪಕ್ಷ ಮತ್ತು ಹಳೆಯ ಪಕ್ಷವಾಗಿರುವುದರಿಂದ ತಮಗೆ ಸಚಿವ ಸ್ಥಾನ ಸಿಗಲಿಲ್ಲ. ಸಚಿವ ಸ್ಥಾನದ ಬಗ್ಗೆ ತಮ್ಮಲ್ಲಿ ಈಗ ಯಾವುದೇ ನಿರೀಕ್ಷೆಗಳು ಉಳಿದಿಲ್ಲ ಎಂದರು.
ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿ ಸಚಿವ ಸ್ಥಾನ ನೀಡಿದ್ದರೆ ಸಚಿವನಾಗಿ ಜನಸೇವೆ ಮಾಡುತ್ತಿದ್ದೆ. ಸದ್ಯಕ್ಕೆ ನಾನು ಶಾಸಕನಾಗಿ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿರುವುದಾಗಿ ಹೇಳಿದರು.
ಒಂದು ವೇಳೆ ತಾವು ಜೆಡಿಎಸ್ ಶಾಸಕರಾಗಿದ್ದರೆ ಈಗಾಗಲೇ ಸಚಿವನಾಗಿರುತ್ತಿದ್ದೆ. ಕೇಳುವ ಮುನ್ನವೇ ಸಚಿವ ಸ್ಥಾನ ಸಿಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಜೆಪಿನಗರದ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಮುನ್ನ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಸಚಿವ ಸ್ಥಾನ ನೀಡುವಂತೆ ಸುಧಾಕರ್ ಅವರ ಬೆಂಬಲಿಗರು ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಮಾಡಿದ್ದರು.