ಬೆಂಗಳೂರು, ಜೂ.28- ಹಿಂದುಳಿದ ವರ್ಗಗಳ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯದ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುತ್ತಿರುವ ಕ್ರಮವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ತೀವ್ರವಾಗಿ ಖಂಡಿಸಿದೆ.
ಸಂಘದ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ ಮುಂತಾದವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುರುಬ ಸಮುದಾಯದ ಅಧಿಕಾರಿಗಳನ್ನು ಅವಧಿ ಪೂರ್ವ ವರ್ಗಾವಣೆ ಮಾಡಲಾಗುತ್ತಿದೆ. ಕೂಡಲೇ ಇವರನ್ನು ಮರು ನಿಯುಕ್ತಿಗೊಳಿಸಬೇಕೆಂದು ಆಗ್ರಹಿಸಿದರು.
ಅಧಿಕಾರಿಗಳು ಕುರುಬ ಸಮುದಾಯದವರು ಎಂಬ ಕಾರಣಕ್ಕೆ ಮನಸೋ ಇಚ್ಛೆ ವರ್ಗಾಯಿಸುತ್ತಿರುವುದರಿಂದ ಸಮ್ಮಿಶ್ರ ಸರ್ಕಾರದ ಮೌಲ್ಯ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ನಾಡಿನ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದೆ. ಹಲವು ಅಧಿಕಾರಿಗಳಿಗೆ ಸೇಡಿನ ಕ್ರಮವಾಗಿ ಸ್ಥಳ ತೋರಿಸದೆ ವರ್ಗಾಯಿಸಿ ಅವಮಾನಗೊಳಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಜಾತಿ ಕಾರಣಕ್ಕಾಗಿ ವರ್ಗಾಯಿಸುವುದು ಅವರುಗಳಲ್ಲಿರುವ ಆತ್ಮಸ್ಥೈರ್ಯ, ಸಾಮಥ್ರ್ಯ, ಪ್ರತಿಭೆ ಎಲ್ಲವನ್ನೂ ಕುಂದುವಂತೆ ಮಾಡುತ್ತದೆ. ಇಂತಹ ಕಿರುಕುಳವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಸಮ್ಮಿಶ್ರ ಸರ್ಕಾರ ರಚನೆಗೆ ಸಂಪೂರ್ಣ ಸಹಮತ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿಸಿ ಎಲ್ಲ ನಿರ್ಣಯಗಳನ್ನೂ ಏಕಪಕ್ಷೀಯವಾಗಿ ಕೈಗೊಳ್ಳುತ್ತಿರುವುದು ಸೂಕ್ತವಲ್ಲ ಎಂದು ಆರೋಪಿಸಿದರು. ಸಂಘದ ಖಜಾಂಚಿ ಕೆ.ಟಿ.ನಾಗರಾಜ್, ಸಂಘಟನಾ ಕಾರ್ಯದರ್ಶಿ ಕೆ.ಎಂ.ಕೃಷ್ಣಮೂರ್ತಿ, ಟಿ.ರಾಜ್ಕುಮಾರ್ ಮುಂತಾದವರು ಈ ಸಂದರ್ಭದಲ್ಲಿದ್ದರು.