ಅಹಿಂದ ಮಂತ್ರ ಜಪಿಸಲು ಮುಂದಾದ ಸಿದ್ದರಾಮಯ್ಯಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ತಂತ್ರ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ನಾನು ಹೇಳಿದ ಮಾತೇ ನಡೆಯಬೇಕು ಅಂತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.

ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಇರತ್ತೋ ಇಲ್ಲವೋ ಹೇಳೋಕೆ ಆಗಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಆದ್ದರಿಂದ ಸಿದ್ದರಾಮಯ್ಯ ತಮ್ಮ ಈ ವರ್ತನೆಯ ಬಗ್ಗೆ ಈಗ ಸ್ಪಷ್ಟನೆ ನೀಡಬೇಕಿರುವುದು ಹೈಕಮಾಂಡ್ ನಾಯಕರಿಗಲ್ಲ. ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊಡಬೇಕು. ನಿಮ್ಮ ಸಮಸ್ಯೆ ಏನೇ ಇದ್ದರೂ ಖರ್ಗೆ ಬಳಿ ಚರ್ಚಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಂದೇಶ ರವಾನಿಸಿದೆಯಂತೆ.

ಇಂದು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಹತ್ವದ ಭೇಟಿ ನಡೆಯಲಿದೆ. ಭೇಟಿ ವೇಳೆ ಸಿದ್ದರಾಮಯ್ಯ ತಮ್ಮ ಅಸಮಧಾನ ಮತ್ತು ಅಸಹನೆ ಎಲ್ಲವನ್ನು ಖರ್ಗೆ ಬಳಿ ಹೇಳಿಕೊಳ್ಳಬೇಕು. ಬಳಿಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಖರ್ಗೆ ಮಾತುಕತೆ ನಡೆಸಲಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ನೀವು ಪ್ರಶ್ನಾತೀತ ನಾಯಕರಲ್ಲ. ನೀವೊಬ್ಬರೇ ಎಲ್ಲಾ ಅಲ್ಲ. ನೀವು ಮಾಡಿದ ಎಲ್ಲವೂ ಸರಿಯಲ್ಲ. ನಿಮ್ಮ ತಪ್ಪನ್ನ ತಿದ್ದೋರು ರಾಜ್ಯದಲ್ಲೇ ಇದ್ದಾರೆ ಎಂಬ ಸಂದೇಶವನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ರವಾನಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ