
ಧರ್ಮಸ್ಥಳ, ಜೂ.28- ಇಲ್ಲಿನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕಳೆದ 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ಹಿಂದಿರುಗಿದರು. ಇದಕ್ಕೂ ಮುನ್ನ ತಮಗೆ ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು ಹಾಗೂ ಅವರೊಂದಿಗೆ ಕೆಲಕಾಲ ಸಂವಾದ ನಡೆಸಿದರು.
ನಂತರ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಯೋಗಕ್ಷೇಮ ವಿಚಾರಿಸಲು ಬಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರಿಗೂ ಕೂಡ ವಿಶೇಷ ಧನ್ಯವಾದ ಅರ್ಪಿಸಿದರು. ಶಾಂತಿವನದ ಕಾರ್ಯದರ್ಶಿಯಾದ ಸೀತಾರಾಮಶೆಟ್ಟಿ ಅವರು ಸಿದ್ದರಾಮಯ್ಯನವರನ್ನು ಬೀಳ್ಕೊಟ್ಟರು. ಕಳೆದ 12 ದಿನಗಳಿಂದ ಸಿದ್ದರಾಮಯ್ಯ ಚಿಕಿತ್ಸೆ ಪಡೆಯುತ್ತಿದ್ದ ಪ್ರಕೃತಿ ಚಿಕಿತ್ಸಾ ಕೇಂದ್ರ ಚಿಕಿತ್ಸೆಯ ತಾಣ ಅಷ್ಟೇ ಅಲ್ಲದೆ ಹಲವು ರಾಜಕೀಯ ಚರ್ಚೆಗಳ ತಾಣವಾಗಿಯೂ ಕೂಡ ಮಾರ್ಪಟ್ಟಿತ್ತು. ಚಿಕಿತ್ಸೆ ಪಡೆಯಲೆಂದು ದಾಖಲಾಗಿದ್ದ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಕಾಂಗ್ರೆಸ್ ಶಾಸಕರು, ಸಚಿವರು ತೆರಳಿದ್ದು, ಅವರೊಂದಿಗೆ ಸಿದ್ದರಾಮಯ್ಯನವರು ನಡೆಸಿದ್ದ ಮಾತುಕತೆ ಮಾಧ್ಯಮಗಳಲ್ಲಿ ಬಿತ್ತರಗೊಂಡು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ನಾಲ್ಕು ದಿನಗಳಿಂದ ಸಿದ್ದರಾಮಯ್ಯ ಚಿಕಿತ್ಸೆ ಪಡೆಯುತ್ತಿದ್ದ ಪ್ರಕೃತಿ ಚಿಕಿತ್ಸಾ ಕೇಂದ್ರವೇ ರಾಜಕೀಯ ಚರ್ಚಾ ಕೇಂದ್ರವಾಗಿ ಮಾರ್ಪಟ್ಟಿತ್ತು. ಸಿದ್ದರಾಮಯ್ಯನವರು ಕೂಡ ರಾಜಕೀಯ ಚರ್ಚಾ ಕೇಂದ್ರಬಿಂದುವಾಗಿದ್ದರು. ಕಳೆದೆರಡು ದಿನಗಳಿಂದ ಅವರನ್ನು ಭೇಟಿ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗಿತ್ತು. ಇಂದು ಅವರು ತಮ್ಮನ್ನು ಭೇಟಿ ಮಾಡಲೆಂದು ಬಂದವರೊಂದಿಗೆ ಚರ್ಚಿಸಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆಲ್ಲ ಕೃತಜ್ಞತೆ ಅರ್ಪಿಸಿ ಅಲ್ಲಿನ ಚಿಕಿತ್ಸಾ ಕೇಂದ್ರದ ಕಾರ್ಯದರ್ಶಿಯವರಿಗೆ ಧನ್ಯವಾದ ತಿಳಿಸಿ ಹಿಂದಿರುಗಿದರು.