ಬೆಂಗಳೂರು: ರತ್ನಪ್ರಭಾ ಅವರ ಸೇವಾವಧಿಯನ್ನು ಮುಂದಿನ ಮೂರು ತಿಂಗಳು ಮುಂದುವರಿಸಬೇಕೆಂಬ ಪ್ರಸ್ತಾಪವನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮಾಡಿತ್ತು. ಆದರೆ ಆ ಮನವಿಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಿಂದಕ್ಕೆ ಪಡೆದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ರತ್ನಪ್ರಭಾ ಅವರ ಸೇವಾವಧಿ 2018ರ ಮಾರ್ಚ್ ಅಂತ್ಯಕ್ಕೆ ಮುಗಿದಿತ್ತು. ಇದೇ ವೇಳೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ಸರ್ಕಾರ ಅವರ ಸೇವಾವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲು ಆದೇಶಿಸಿತ್ತು. ಈಗ ಹೊಸ ಸರ್ಕಾರ ರಚನೆಯಾದ ಬಳಿಕ ರತ್ನಪ್ರಭಾ ಅವರಿಗೆ ಮತ್ತೆ ಮೂರು ತಿಂಗಳ ಅವಧಿ ವಿಸ್ತರಣೆಯಾಗುತ್ತದೆಂಬ ಮಾತು ಕೇಳಿಬಂದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇವರ ಸೇವಾವಧಿ ವಿಸ್ತರಿಸುವ ಅಗತ್ಯ ಇದೆ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.
ಬುಧವಾರದ ಬೆಳವಣಿಗೆಯಲ್ಲಿ ರತ್ನಪ್ರಭಾ ಬದಲು ಟಿ.ಎಂ.ವಿಜಯಭಾಸ್ಕರ್ ಅವರನ್ನು ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿ ಕೂರಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯ ಕಾರ್ಯದರ್ಶಿಯಾಗಿದ್ದ ಸುಭಾಷ್ ಚಂದ್ರ ಕುಂಟಿಯಾ 2017ರ ನವೆಂಬರ್ 30 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರು. ಈ ವೇಳೆ ರತ್ನಪ್ರಭಾ ಅವರನ್ನೇ ಆಯ್ಕೆ ಮಾಡಬೇಕೆಂದು ರಾಜಕೀಯ ಒತ್ತಡವೂ ಕೇಳಿಬಂದಿತ್ತು.
ನೂತನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡಿತ್ತು. ಸೇವಾ ಹಿರಿತನದ ಆಧಾರದ ಮೇಲೆ ರತ್ನಪ್ರಭಾ ಅವರನ್ನೇ ನೇಮಕ ಮಾಡಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದರು. ಅಂದು ಸೇವಾ ಹಿರಿತನದಲ್ಲಿ ರತ್ನಪ್ರಭಾ, ಕೆ.ಎಸ್. ಪಟ್ನಾಯಕ್ ಹಾಗೂ ಲತಾ ಕೃಷ್ಣರಾವ್ ಅವರ ಹೆಸರಿತ್ತು. ಅಂತಿಮವಾಗಿ ರತ್ನಪ್ರಭಾ ಅವರನ್ನೇ ಆಯ್ಕೆ ಮಾಡಿ ಆಗಿನ ಸರ್ಕಾರ ಆದೇಶ ಹೊರಡಿಸಿತ್ತು.
1981ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿರುವ ರತ್ನಪ್ರಭಾ ಮೂಲತಃ ಆಂಧ್ರ ಪ್ರದೇಶದವರು. 2017ರ ನವೆಂಬರ್ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕರ್ನಾಟಕದ ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಅವರು ಸರ್ಕಾರದ ಜವಾಬ್ದಾರಿ ಹೊತ್ತಿದ್ದರು.
ಪ್ರಸ್ತಾವನೆ ಹಿಂದಕ್ಕೆ?
ಜತೆಗೆ ಈಗಾಗಲೇ ರಾಜ್ಯದಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ನಡೆದಿದ್ದು, ಶಿಫಾರಸು ವಾಪಸ್ ಪಡೆಯುವುದಾಗಿ ಪತ್ರ ಬರೆದಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ರತ್ನಪ್ರಭಾ ಅವರಿಗೆ ಎರಡನೇ ಬಾರಿಗೆ ಅವಧಿ ವಿಸ್ತರಣೆ ನೀಡಲು ಕೇಂದ್ರ ಸರ್ಕಾರ ಒಲವು ತೋರಿಸಿಲ್ಲ ಎಂಬ ಮಾಹಿತಿಯೂ ಇದೆ.
ಒಟ್ಟಾರೆ ಹಿಂದಿನ ಸರ್ಕಾರದಲ್ಲಿ ನೇಮಕವಾಗಿದ್ದ ರತ್ನಪ್ರಭಾ ಬಗ್ಗೆ ಸಮ್ಮಿಶ್ರ ಸರ್ಕಾರಕ್ಕೆ ಒಲವಿಲ್ಲ ಎನ್ನಲಾಗುತ್ತಿದೆ.