ಮಘರ್, ಜೂ.28-ಪ್ರಧಾನಮಂತ್ರಿ ಹುದ್ದೆಗೇರಲು ನರೇಂದ್ರ ಮೋದಿ ಅವರು 2014ರಲ್ಲಿ ಮೋಕ್ಷದ ತಾಣವೆಂದೇ ಪರಿಗಣಿಸಲಾದ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ವ್ಯತಿರಿಕ್ತ ಎಂಬಂತೆ 2019ರ ಸಾರ್ವತ್ರಿಕ ಮಹಾಸಮರದಲ್ಲಿ ಉತ್ತರ ಪ್ರದೇಶದಲ್ಲಿರುವ ನರಕದ ಬಾಗಿಲು ಎಂದೇ ಗುರುತಿಸಲಾಗಿರುವ ಮಘರ್‍ನಿಂದ ಮೋದಿ ಚುನಾವಣಾ ಪಾಂಚಜನ್ಯ ಮೊಳಗಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಹಾತ್ಮ ಕಬೀರ್ ಮಹೋತ್ಸವಕ್ಕೂ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ ಇಂದು ಉತ್ತರ ಪ್ರದೇಶದ ಮಘರ್‍ನ ಸಂತ ಕಬೀರ್ ಮಹಾ ಪರಿನಿರ್ವಾಣ ಸ್ಥಳದಲ್ಲಿ ಎರಡು ದಿನಗಳ ಸಂತ ಕಬೀರ್ ಮಹೋತ್ಸವ ಉದ್ಘಾಟಿಸಿದರು. ಬೃಹತ್ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ಮುಂಬರುವ ಲೋಕಸಭಾಚುನಾವಣೆ ಪ್ರಚಾರಕ್ಕೆ ಅವು ವಿಧ್ಯುಕ್ತ ಮುನ್ನುಡಿಯನ್ನೂ ಬರೆದಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಮಹೇಶ್ ಶರ್ಮ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಬೀರ್ ಮಹೋತ್ಸವದ ಅಂಗವಾಗಿ ಸಂತನ ಮಹತ್ವದ ಸಂದೇಶಗಳನ್ನು ಸಾರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಮೋದಿ ಕಬೀರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಛಾದರ್ ಸಮರ್ಪಿಸಿದರು.
ಕಬೀರರು ವಾರಣಾಸಿಯಲ್ಲಿ ಜನಿಸಿ, ಮಘರ್‍ನಲ್ಲಿ ವಿಧಿವಶರಾಗಿದ್ದರು. ಇದೇ ವರ್ಷ ಕಬೀರರ 620ನೇ ಜನ್ಮ ವರುಷ ಹಾಗೂ 500ನೇ ಮಹಾ ಪರಿನಿರ್ವಾಣ ಸಂವತ್ಸರವನ್ನಾಗಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಇಂದು ಮೋದಿ ಕೆಲವು ವಿದ್ಯುಕ್ತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಬೀರ್ ಸಂಶೋಧನಾ ಸಂಸ್ಥೆಗೆ ಅವರು ಶಿಲಾನ್ಯಾಸ ನೆರವೇರಿಸಿ. ಸಂತರ ಏಕತೆ, ಸೌಹಾರ್ದತೆ ಮತ್ತು ಸಮಗ್ರತೆ ಸಂದೇಶಗಳ ಮೂಲಕ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.
ಮಘರ್-ಉತ್ತರ ಪ್ರದೇಶದರಾಜಧಾನಿ ಲಕ್ನೋನಿಂದ 250 ಕಿ.ಮೀ.ದೂರದಲ್ಲಿ ಗೋರಖ್‍ಪುರ್‍ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಘರ್, ಪೌರಾಣಿಕ ಮತ್ತು ಚಾರಿತ್ರಿಕ ಐತಿಹ್ಯದ ತಾಣ. ಇದು ಮಹಾತ್ಮ ಸಂತಕಬೀರ್‍ರವರ ಮಹಾ ಪರಿನಿರ್ವಾಣ ಸ್ಥಳ. ಇದಕ್ಕೆ ನರಕದ ಬಾಗಿಲು ಅಥವಾ ನಾಕದದ್ವಾರ ಎಂಬ ಅನ್ವರ್ಥನಾಮವೂ ಇದೆ.. ಅಲ್ಲದೇ ಇದು ಹಿಂದು ಮತ್ತು ಮುಸ್ಲಿಮರ ಸೌಹಾರ್ದತೆಯ ಪವಿತ್ರ ಸ್ಥಳವೂ ಆಗಿದೆ.
ಇಲ್ಲಿ ಮಡಿದವರು ನರಕಕ್ಕೆ ಹೋಗುತ್ತಾರೆ ಎಂಬ ಮೂಢನಂಬಿಕೆಯನ್ನು ದೂರ ಮಾಡಲು ಪ್ರಾತಃಸ್ಮರಣೀಯ ಕಬೀರ್ ಮಹಾತ್ಮರು 15ನೇ ಶತಮಾನದಲ್ಲಿ ತಮ್ಮ ಜೀವನದ ಕೊನೆಯುಸಿರೆಳೆದರು. ಆಗಿನಿಂದಲೂ ಇದು ನರಕದ ಬಾಗಿಲು ಎಂದೇ ಪರಿಗಣಿತವಾಗಿದ್ದರೂ, ಈ ಸ್ಥಳವು ಮಂಗಳಪ್ರದ ಎಂಬ ನಂಬಿಕೆಯೂ ಅನೇಕರಲ್ಲಿದೆ.