ನಿಗೂಢವಾಗುತ್ತಲೇ ಇದೆ ಜಯಲಲಿತಾ ಸಾವಿನ ರಹಸ್ಯ: ಕಾರು ಚಾಲಕ ಕೊಟ್ಟ ಮಾಹಿತಿಯಲ್ಲೇನಿದೆ?

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವನ್ನಪ್ಪಿ ಒಂದೂವರೆ ವರ್ಷವಾದರೂ ಅವರ ಸಾವಿನ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆಬಿದ್ದಿಲ್ಲ. ಜಯಯಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ, ವೈದ್ಯರಾದ ಶಿವಕುಮಾರ್​ ಮತ್ತು ಅವರ ಕಾರಿನ ಚಾಲಕ ಹೊಸ ಸಂಗತಿಯನ್ನು ಹೊರಹಾಕಿದ್ದು, ಜಯಲಲಿತಾ ಸಾವಿನ ರಹಸ್ಯ ಮತ್ತಷ್ಟು ಕಗ್ಗಂಟಾದಂತಾಗಿದೆ.
ಸುದೀರ್ಘ ಕಾಲದವರೆಗೆ ಆಸ್ಪತ್ರೆಯಲ್ಲಿದ್ದಾಗ ಹೊರಪ್ರಪಂಚಕ್ಕೆ ನಿಗೂಢವಾಗಿದ್ದ ಜಯಲಲಿತಾ ಸತ್ತ ನಂತರ ಅವರ ಸಾವು ಇಂದಿಗೂ ನಿಗೂಢವಾಗೇ ಉಳಿದಿದೆ. ಜಯಲಲಿತಾ ಸಾವಿನ ತನಿಖಾ ತಂಡ ರಹಸ್ಯ ಸಂಗತಿಯನ್ನು ಪತ್ತೆಹಚ್ಚಿದ್ದು, 2016ರ ಸೆಪ್ಟೆಂಬರ್​ 22ರಂದು ಜಯಲಲಿತಾ ಕೋಮಾಗೆ ಹೋಗುವ ಮೊದಲು ಅವರಿಗಾಗಿ ನಿಯೋಜನೆಗೊಂಡಿದ್ದ ವೈದ್ಯರು ಪೋಸ್​ ಗಾರ್ಡನ್​ನ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
1991ರಿಂದಲೂ ಜಯಲಲಿತಾ ಅವರ ಕಾರಿನ ಚಾಲಕರಾಗಿದ್ದ ಕಣ್ಣನ್​ ಈ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಜಯಲಲಿತಾ ಮನೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರಾದ ಶಿವಕುಮಾರ್​ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಮ್ಮನವರ ರೂಮಿನಿಂದ ಹೊರಹೋಗಿದ್ದರು. ಯಾವಾಗ ಅವರು ವಾಪಸ್​ ಬಂದರು ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ನಾವೇ ಆಸ್ಪತ್ರೆಗೆ ಸೇರಿಸಿದೆವು:
ಸಿಎನ್​ಎನ್​- ನ್ಯೂಸ್​ 18 ಜೊತೆಗೆ ಮಾತನಾಡಿರುವ ಕಣ್ಣನ್​, ‘ಜಯಲಲಿತಾ ಆಸ್ಪತ್ರೆಗೆ ಸೇರುವ ಮೊದಲು ತಾನು ಅವರ ರೂಮಿಗೆ ಹೋಗಿದ್ದಾಗ ಆಕೆ ಆರಾಮ್​ ಚೇರ್​ನಲ್ಲಿ ಕುಳಿತುಕೊಂಡಿದ್ದರು. ಆಗ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಅವರ ಪಕ್ಕದಲ್ಲಿ ತೆರೆದಿಟ್ಟಿದ್ದ ಕೆಲ ಫೈಲುಗಳಿದ್ದವು. ಅದರ ಮೇಲೆ ಓಪನ್​ ಮಾಡಿದ ಪೆನ್​ ಇಡಲಾಗಿತ್ತು. ಆಗ ಅಲ್ಲಿಗೆ ಬಂದ ಚಿನ್ನಮ್ಮ (ಶಶಿಕಲಾ) ಕುರ್ಚಿಯಲ್ಲಿ ಕುಳಿತಿದ್ದ ಅಮ್ಮನವರನ್ನು ಎತ್ತಿಕೊಂಡು ಬರಲು ಹೇಳಿದರು. ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಆಮೇಲೆ ಪಿಎಸ್​ಓ ವೀರಪೆರುಮಾಳ್​ ಬಂದರು. ನಾವಿಬ್ಬರೂ ಸೇರಿ ಅಮ್ಮ ಕುಳಿತಿದ್ದ ಕುರ್ಚಿಯನ್ನು ಎತ್ತಿಕೊಂಡು ರೂಮಿನಿಂದ ಹೊರಟೆವು. ಆಗ ಅವರು ಕುರ್ಚಿಯಿಂದ ಕೆಳಗೆ ಮುಗ್ಗರಿಸಿದರು. ಹಾಗಾಗಿ, ಸ್ಟ್ರೆಚರ್​ ತೆಗೆದುಕೊಂಡು ಬಂದೆವು’ ಎಂದು ಎರಡು ವರ್ಷದ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ.
ಆದರೆ, ಇದ್ಯಾವ ಮಾಹಿತಿಯನ್ನೂ ಶಶಿಕಲಾ ಮತ್ತು ಶಿವಕುಮಾರ್​ ಅವರು ತನಿಖಾ ತಂಡದ ಬಳಿ ಹೇಳಿಲ್ಲವಾದ್ದರಿಂದ ಕುತೂಹಲ ಮತ್ತು ಸಂಶಯ ಹೆಚ್ಚಾಗಿದೆ. ಫೋಸ್​ ಗಾರ್ಡನ್​ನಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದ ಬೇಕಾದರೆ ಪರೀಕ್ಷಿಸಿ ಎಂದು ತನಿಖಾ ತಂಡದ ಅಧಿಕಾರಿಗಳ ಮುಂದೆ ಹೇಳಿರುವ ಕಣ್ಣನ್​, ಇದುವರೆಗೆ ಆ ಫೂಟೇಜ್​ ಉಳಿದಿರುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ