ನವದೆಹಲಿ, ಜೂ.28- ದೇಶದಲ್ಲಿ ಹೊಸ ರಾಜಕೀಯ ಶಕ್ತಿ ರೂಪುಗೊಳ್ಳುವ ಬಗ್ಗೆ ಅಂದೇ ಕರ್ನಾಟಕದಲ್ಲಿ ಮುನ್ಸೂಚನೆ ದೊರೆತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅನಿವಾರ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ದೆಹಲಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ. ಈ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸುವ ಕುರಿತಂತೆ ಚರ್ಚೆ ನಡೆಯಲಿದೆ ಎಂದರು.
ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇದಕ್ಕಾಗಿ ತಯಾರಿಗಳು ಆರಂಭಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಿಎಸ್ಪಿ ಕೂಡ ನಮ್ಮ ಜತೆ ಇರುವುದರಿಂದ ಅವರಿಗೂ ಒಂದು ಸೀಟು ಬಿಟ್ಟುಕೊಡಲಾಗುವುದು. ಉಳಿದಂತೆ ಸೀಟು ಹಂಚಿಕೆ ಕುರಿತಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನಾನು ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.
ತೃತೀಯ ರಂಗ ರಚನೆ ಕುರಿತಂತೆ ಈಗಾಗಲೇ ಹಲವು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಹಾಗೂ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರು ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಬಿಹಾರದಲ್ಲಿ ನಿತೀಶ್ಕುಮಾರ್ ಕೂಡ ಆರ್ಜೆಡಿಗೆ ಮರಳುವ ಸಾಧ್ಯತೆ ಇದೆ. ಅರವಿಂದ್ ಕೇಜ್ರಿವಾಲ್ ಏನು ಮಾಡುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ. ಹಾಗಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನಿಂದ ದೂರವಿರಲು ಕೆಲವು ಪ್ರಾದೇಶಿಕ ಪಕ್ಷಗಳು ಮುಂದಾಗುತ್ತಿವೆ. ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ನಲ್ಲಿ ಕೆಲ ಬೆಳವಣಿಗೆಗಳ ಬಗ್ಗೆ ಗಮನಿಸಿದ್ದೇನೆ. ಆದರೆ, ಇದು ಸಾಮಾನ್ಯ. ಸರ್ಕಾರಕ್ಕೆ ಇದರಿಂದ ಯಾವುದೇ ತೊಂದರೆ ಇಲ್ಲ. ಗೊಂದಲಗಳೇನಾದರೂ ಇದ್ದರೆ ಅವುಗಳನ್ನು ಪರಿಹರಿಸುವುದಾಗಿ ದೇವೇಗೌಡರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಶಾಂತಿವನದಲ್ಲಿ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೌಡರು, ಲೋಕಸಭೆ ಚುನಾವಣೆ ನಂತರ ಮುಂದಿನ ನಡೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.