ಮಹತ್ವದ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕರಿಸಲು ತಡೆಗೋಡೆ – ಪ್ರಧಾನಿ

ಮಘರ್, ಜೂ.28-ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನದಿಂದ ರಕ್ಷಣೆ ನೀಡುವ ಮಹತ್ವದ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಸಂಸತ್‍ನಲ್ಲಿ ಅಂಗೀಕರಿಸಲು ಕೆಲವು ರಾಜಕೀಯ ಪಕ್ಷಗಳು ತಡೆಗೋಡೆ ಸೃಷ್ಟಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮಘರ್‍ನಲ್ಲಿಂದು ಸಂತ ಕಬೀರ್ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ಬೃಹತ್ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದರು. 43 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಪಕ್ಷ ಮತ್ತು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕೆಲವು ರಾಜಕೀಯ ಬಣಗಳು ಈಗ ರಾಜಕೀಯ ಲಾಭ ಮತ್ತು ಸ್ವಾರ್ಥಕ್ಕಾಗಿ ಒಗ್ಗೂಡುತ್ತಿವೆ ಎಂದು ಮೋದಿ ಕಟುವಾಗಿ ಟೀಕಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆಯ ಉದಾತ್ತ ತತ್ವವನ್ನು ಸಾರಿದ್ದರು. ಆದರೆ, ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಮಹಾಪುರುಷನ ತತ್ವಾದರ್ಶಗಳನ್ನು ರಾಜಕೀಯ ಲಾಭ ಮತ್ತು ಸ್ವಾರ್ಥ ಲಾಲಸೆಗಾಗಿ ಬಳಸಿಕೊಳ್ಳುತ್ತಿವೆ. ಇದು ದುರದೃಷ್ಟಕರ ಎಂದು ಮೋದಿ ವಿಷಾದಿಸಿದರು. ತಾವು ಮಹಾತ್ಮ, ಕಬೀರರ ತತ್ವ ಮತ್ತು ಆದರ್ಶಗಳನ್ನು ಪಾಲಿಸುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಗೆ ಈಗ ಬಂಗಲೆಗಳದ್ದೇ ಚಿಂತೆಯಾಗಿದೆ ಎಂದು ಮೋದಿ ಲೇವಡಿ ಮಾಡಿದರು. ಕಾಂಗ್ರೆಸ್‍ನಲ್ಲಿ ಕೆಲವು ರಾಜಕೀಯ ಪಕ್ಷಗಳು ಜನರಲ್ಲಿ ವಿನಾಕಾರಣ ಗೊಂದಲ ಮತ್ತು ಭೀತಿಯ ವಾತಾವರಣ ಸೃಷ್ಟಿಸುತ್ತಿವೆ. ಜನರು ಇಂತಹ ಯತ್ನಗಳಿಗೆ ಆಸ್ಪದ ಕೊಡಬಾರದು ಎಂದು ಮೋದಿ ಮನವಿ ಮಾಡಿದರು. ಇದಕ್ಕೂ ಮುನ್ನ ಪ್ರಧಾನಿಯವರು ಮಹಾತ್ಮ ಕಬೀರ್ ಅವರ ಮಹಾಪರಿನಿರ್ವಾಣ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಗೆ ಪವಿತ್ರ ಛಾದರ್ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಕಬೀರ್ ಸಂಶೋಧನಾ ಕೇಂದ್ರವನ್ನು ಮೋದಿ ಉದ್ಘಾಟಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ