ಬೆಂಗಳೂರು, ಜೂ.27- ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮುಂಗಾರು ದುರ್ಬಲಗೊಂಡಿದೆ. ಮೋಡಕವಿದ ವಾತಾವರಣ ಹಾಗೂ ಮೇಲ್ಮೈ ಗಾಳಿ ಬೀಸುತ್ತಿದ್ದು, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ.
ಜುಲೈ ಮೊದಲ ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಜೂನ್ ಕೊನೆಯ ವಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಕಳೆದ ಒಂದು ವಾರದಿಂದಲೂ ಉತ್ತಮ ಮಳೆಯಾದ ವರದಿಯಾಗಿಲ್ಲ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರೆದಿದ್ದರೂ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿಲ್ಲ.
ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದ ಮಳೆ ಇಳಿಮುಖವಾಗಿದೆ. ಜೂನ್ ಮೊದಲ ವಾರದಲ್ಲಿ ವಾಡಿಕೆಗಿಂತ ಶೇ.94ರಷ್ಟು ಹೆಚ್ಚು ಮಳೆಯಾಗಿತ್ತು. ಆನಂತರ ಮಳೆ ಕಡಿಮೆಯಾಗಿತ್ತು. ಆದರೂ ಶೇ.26ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಮುಂಗಾರು ಮಳೆ ದುರ್ಬಲಗೊಂಡಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ ಎಂದರು.
ಬಿತ್ತನೆಗೆ ರೈತರು ಭೂಮಿ ಸಿದ್ಧತೆ ಮಾಡಿಕೊಂಡು ಮ¼ಯನ್ನು ಎದುರು ನೋಡುತ್ತಿದ್ದಾರೆ. ಜುಲೈ ಮೊದಲ ವಾರದಲ್ಲಿ ಒಳ್ಳೆಯ ಮಳೆಯಾದರೆ ರೈತರ ಬಿತ್ತನೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಶ್ರೀನಿವಾಸ್ ಹೇಳಿದರು.