ರಾಂಚಿ: ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ಮತ್ತು ಛತ್ತೀಸ್ಗಢದ ಗಡಿಯಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಯೋಧರನ್ನು ಗುರಿಯಾಗಿರಿಸಿಕೊಂಡು ನಕ್ಸಲರು ನಡೆಸಿದ ಗುಂಡಿನ ದಾಳಿಗೆ ಜಾಗ್ವಾರ್ ಪೋರ್ಸ್ನ 6 ಯೋಧರು ಹುತಾತ್ಮರಾಗಿದ್ದಾರೆ. ಅಂತೆಯೇ 10 ಮಂದಿ ಸೈನಿಕರಿಗೆ ಗಂಭೀರಗಾಯಗಳಾಗಿವೆ.
ಈ ಬಗ್ಗೆ ಮಾಬಹಿತಿ ನೀಡಿರುವ ಸೇನಾಧಿಕಾರಿಗಳು ಜಾರ್ಖಂಡ್ನ ಗರ್ವಾ ಜಿಲ್ಲೆಯ ಬುಧಪಹದ್ ಪ್ರದೇಶದಲ್ಲಿ ನಕ್ಸಲರು ನಡೆಸಿದ ಲ್ಯಾಂಡ್ಮೈನ್ ಸ್ಫೋಟದಿಂದಾಗಿ 4 ಯೋಧರು ಹುತಾತ್ಮರಾಗಿದ್ದು, ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಗರ್ವಾ ಜಿಲ್ಲೆಯ ಚಿಂಜೋ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಪೊಲೀಸರ ಬಳಿ ಮಾಹಿತಿ ಇತ್ತು. ಮಂಗಳವಾರ ಸಂಜೆ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ಹೋದಾಗ ನಕ್ಸಲರು ದಾಳಿ ನಡೆಸಿದ್ದಾರೆ ಎಂದು ಡಿಐಜಿ ವಿಪುಲ್ ಶುಕ್ಲ ತಿಳಿಸಿದ್ದಾರೆ.
ಅಂತೆಯೇ ಈ ನಕ್ಸಲ್ ಕಾರ್ಯಾಚರಣೆಯ ಹಿಂದೆ ಮಾಸ್ಟರ್ಮೈಂಡ್ ನಕ್ಸಲ್ ನಾಯಕ ವಿಶ್ವನಾಥ್ ಅಲಿಯಾಸ್ ಸಂತೋಷ್ ಇರುವುದಾಗಿ ತಿಳಿದಿಬಂದಿದ್ದು, ವಿಶ್ವನಾಥ್ ಆಂಧ್ರ ಪ್ರದೇಶದಿಂದ ಜಾರ್ಖಂಡ್ಗೆ ಬಂದಿರುವುದಾಗಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಕೋಬ್ರಾ ತಂಡ, ಸಿಆರ್ಪಿಎಫ್ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದ್ದಾರೆ.