ರೈತರ 30 ಸಾವಿರ ಕೋಟಿ ಸಾಲಮನ್ನಾ ಮಾಡಲು ಸಿಎಂ ತೀರ್ಮಾನ

 

ಬೆಂಗಳೂರು,ಜೂ.27-ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ 30 ಸಾವಿರ ಕೋಟಿ ಸಾಲಮನ್ನಾ ಮಾಡಲು ತೀರ್ಮಾನಿಸಿದ್ದಾರೆ.
ಜುಲೈ 5ರಂದು ವಿಧಾನಸೌಧದಲ್ಲಿ ಬೆಳಗ್ಗೆ 11.30ಕ್ಕೆ ಮಂಡಿಸಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‍ನಲ್ಲಿ ಜನತೆಗೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 30 ಸಾವಿರ ಕೋಟಿ ಮನ್ನಾ ಮಾಡುವ ಯೋಜ£ಯನ್ನು ಘೋಷಣೆ ಮಾಡಲಿದ್ದಾರೆ.

ಮೊದಲ ಹಂತದಲ್ಲಿ ಸಣ್ಣ, ಅತಿಸಣ್ಣ , ಐದು ಎಕರೆಯೊಳಗೆ ಭೂಮಿ ಹೊಂದಿರುವವರು ಹಾಗೂ ವಾರ್ಷಿಕ ಒಂದು ಲಕ್ಷದೊಳಗಿನ ವರಮಾನವಿರುವ ರೈತರ ಸಾಲಮನ್ನಾವಾಗಲಿದೆ.
ಸಹಕಾರಿ, ವಾಣಿಜ್ಯ ಹಾಗೂ ಇತರೆ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ ಮಾತ್ರ ಮನ್ನಾವಾಗಲಿದೆ. ಈ ಬಾರಿ ಸರ್ಕಾರ ಸಾಲಮನ್ನಾ ಯೋಜನೆ ದುರುಪಯೋಗವಾಗದಂತೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ರಚಿಸಲಿದೆ.
ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ನೀಡಿರುವ ವರದಿ ಪ್ರಕಾರ ಯಾವ ಯಾವ ಬ್ಯಾಂಕ್‍ನಲ್ಲಿ ರೈತರು ಎಷ್ಟು ಪ್ರಮಾಣದಲ್ಲಿ ಸಾಲ ಪಡೆದಿದ್ದಾರೆ. ಅವರ ಹೊಂದಿರುವ ಜಮೀನು, ಸಾಲವನ್ನು ಯಾವ ಉದ್ದೇಶಕ್ಕೆ ಪಡೆದಿದ್ದರು, ಇದರಿಂದ ನಿಜವಾಗಿಯೂ ಪ್ರಯೋಜನವಾಗಿದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಸಾಲ ಮನ್ನಾ ಮಾಡುವ ಯೋಜನೆ ಘೋಷಣೆಯಾಗಲಿದೆ.

ಬ್ಯಾಂಕ್ ಅಧಿಕಾರಿಗಳು ಹಾಗೂ ತಮ್ಮದೇ ಮೂಲದಿಂದ ವಿವಿಧ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಸಾಲದ ಪೂರ್ಣ ಮಾಹಿತಿಯನ್ನು ಪಡೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಎಷ್ಟೇ ಅಡ್ಡಿಪಡಿಸಿದರೂ ಜನತೆಗೆ ನೀಡಿದ ಭರವ¸ಯನ್ನು ಈಡೇರಿಸುವ ದೃಢ ನಿರ್ಧಾರಕ್ಕೆ ಬಂದಿದ್ದಾರೆ.
ರೈತರ ಸಾಲ ಮನ್ನಾ ಮಾಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 53 ಸಾವಿರ ಕೋಟಿ ಹೊರೆಯಾಗಲಿದೆ. ಇದನ್ನು ಒಂದೇ ಹಂತದಲ್ಲಿ ಪ್ರಕಟಿಸುವ ಬದಲು ಮೂರು ಹಂತಗಳಲ್ಲಿ ಸಾಲ ಮನ್ನಾ ಮಾಡುವ ದೃಢ ಸಂಕಲ್ಪವನ್ನು ಕುಮಾರಸ್ವಾಮಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ರೈತರ ಸಾಲಮನ್ನಾ ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪದೆ ಮಧ್ಯವರ್ತಿಗಳಿಗೆ ಹೆಚ್ಚಿನ ಅನುಕೂಲವಾಗಿತ್ತೆಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದ್ದು, ಜಿಲ್ಲಾಧಿಕಾರಿಗಳು ನೀಡುವ ವರದಿ ಅನುಸಾರವೇ ಸಾಲ ಮನ್ನಾವಾಗಲಿದೆ.
ಅಗ್ನಿಪರೀಕ್ಷೆ :
ಸಮ್ಮಿಶ್ರ ಸರ್ಕಾರದ ಆದ್ಯತೆಗಳನ್ನು ಪ್ರತಿಫಲಿಸುವ ಬಜೆಟ್ ಎಂದೇ ಇದು ಬಿಂಬಿತವಾಗಿರುವುದರಿಂದ ಕುಮಾರಸ್ವಾಮಿ ಅವರಿಗೆ ಜು.5 ಅಗ್ನಿಪರೀಕ್ಷೆ ಎಂದು ಹೇಳಲಾಗುತ್ತದೆ.

ಅಂದು ಬಹುನಿರೀಕ್ಷಿತ ಬಜೆಟ್‍ನಲ್ಲಿ ರೈತರ ಸಾಲಮನ್ನಾ ಮಾಡುವ ಯೋಜನೆ ಜೆಡಿಎಸ್‍ಗೆ ಕೃಷಿ ತಂದರೆ ಮಿತ್ರ ಪಕ್ಷ ಕಾಂಗ್ರೆಸ್‍ಗೆ ಅಷ್ಟೇನೂ ಸಮಾಧಾನ ತರುವುದಿಲ್ಲ ಎಂಬ ಕಟುಸತ್ಯ ಕುಮಾರಸ್ವಾಮಿ ಅವರ ಗಮನಕ್ಕೂ ಬಂದಿದೆ.
ಏಕೆಂದರೆ ಸಾಲ ಮನ್ನಾ ಮಾಡುವ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈಗಾಗಲೇ ವಾಕ್ಸಮರ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಸಮನಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ಅವರು ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಕಳಕಂಕದಿಂದ ಹೊರಬರಲು ಮುಂದಾಗಿದ್ದು , ಯಾರು ಎಷ್ಟೇ ವಿರೋಧಿಸಿದರೂ ಕೊಟ್ಟ ವಾಗ್ದಾನದಂತೆ ಸಾಲಮನ್ನಾ ಯೋಜನೆ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ