ಶೇ.100 ಆಮದು ಸುಂಕ ಹೇರಿಕೆ: ಭಾರತದ ವಿರುದ್ಧ ಟ್ರಂಪ್‌ ಆಕ್ರೋಶ

ವಾಷಿಂಗ್ಟನ್‌ : ಭಾರತ ಅಮೆರಿಕನ್‌ ಉತ್ಪನ್ನಗಳ ಮೇಲೆ ಶೇ.100 ರ ಅತ್ಯಧಿಕ ಆಮದು ಸುಂಕವನ್ನು ಹೇರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಪಾದಿಸಿದ್ದಾರೆ.

ಮುಂದಿನ ವಾರ ಭಾರತದೊಂದಿಗೆ ನಡೆಯಲಿರುವ ಚೊಚ್ಚಲ 2 + 2 ಸಂವಾದಕ್ಕೆ ಮುನ್ನವೇ ಅಮೆರಿಕ ಅಧ್ಯಕ್ಷ ಈ ರೀತಿ ಆರೋಪಿಸಿರುವುದು ಭಾರತಕ್ಕೆ ತೀವ್ರ ಇರಿಸು ಮುರಿಸು ಉಂಟು ಮಾಡಿದೆ.

ಭಾರತದಂತಹ ದೇಶಗಳು ನಮ್ಮ ಉತ್ಪನ್ನಗಳಿಗೆ ಅತ್ಯಧಿಕ ಎನಿಸುವ ಶೇ.100 ಆಮದು ಸುಂಕವನ್ನು ಹೇರುತ್ತಿವೆ. ಈ ರೀತಿಯ ಸುಂಕವನ್ನು ಆ ರಾಷ್ಟ್ರಗಳು ಕೈಬಿಡಬೇಕು ಎಂದು ನಾವು ಬಯಸುತ್ತೇವೆ ಎಂದು ಟ್ರಂಪ್‌ ಹೇಳಿದ್ದಾರೆ.

ವಿದೇಶಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೇರುವ ಈಚಿನ ನಿರ್ಧಾರದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಟ್ರಂಪ್‌ ಈ ಉತ್ತರ ನೀಡಿದರು.

ಅಮೆರಿಕದ ವಿರುದ್ಧ ಚೀನ ಮತ್ತು ಐರೋಪ್ಯ ಒಕ್ಕೂಟ  ಈಗಾಗಲೇ ಆರಂಭಿಸಿರುವ ವಾಣಿಜ್ಯ ಸಮರವನ್ನು ಭಾರತ ಕೂಡ ಸೇರಿಕೊಂಡ ಕಾರಣಕ್ಕೆ ಟ್ರಂಪ್‌ ತಮ್ಮ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ