ವಾಷಿಂಗ್ಟನ್ : ಭಾರತ ಅಮೆರಿಕನ್ ಉತ್ಪನ್ನಗಳ ಮೇಲೆ ಶೇ.100 ರ ಅತ್ಯಧಿಕ ಆಮದು ಸುಂಕವನ್ನು ಹೇರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪಾದಿಸಿದ್ದಾರೆ.
ಮುಂದಿನ ವಾರ ಭಾರತದೊಂದಿಗೆ ನಡೆಯಲಿರುವ ಚೊಚ್ಚಲ 2 + 2 ಸಂವಾದಕ್ಕೆ ಮುನ್ನವೇ ಅಮೆರಿಕ ಅಧ್ಯಕ್ಷ ಈ ರೀತಿ ಆರೋಪಿಸಿರುವುದು ಭಾರತಕ್ಕೆ ತೀವ್ರ ಇರಿಸು ಮುರಿಸು ಉಂಟು ಮಾಡಿದೆ.
ಭಾರತದಂತಹ ದೇಶಗಳು ನಮ್ಮ ಉತ್ಪನ್ನಗಳಿಗೆ ಅತ್ಯಧಿಕ ಎನಿಸುವ ಶೇ.100 ಆಮದು ಸುಂಕವನ್ನು ಹೇರುತ್ತಿವೆ. ಈ ರೀತಿಯ ಸುಂಕವನ್ನು ಆ ರಾಷ್ಟ್ರಗಳು ಕೈಬಿಡಬೇಕು ಎಂದು ನಾವು ಬಯಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ವಿದೇಶಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೇರುವ ಈಚಿನ ನಿರ್ಧಾರದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಟ್ರಂಪ್ ಈ ಉತ್ತರ ನೀಡಿದರು.
ಅಮೆರಿಕದ ವಿರುದ್ಧ ಚೀನ ಮತ್ತು ಐರೋಪ್ಯ ಒಕ್ಕೂಟ ಈಗಾಗಲೇ ಆರಂಭಿಸಿರುವ ವಾಣಿಜ್ಯ ಸಮರವನ್ನು ಭಾರತ ಕೂಡ ಸೇರಿಕೊಂಡ ಕಾರಣಕ್ಕೆ ಟ್ರಂಪ್ ತಮ್ಮ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.