ವಿಶ್ವ ವಿಖ್ಯಾತ ಭರಚುಕ್ಕಿ ಜಲಪಾತದ ಸವಿಯ ಸವಿಯಲು ಪ್ರವಾಸಿಗರ ದಂಡು!

ಕೊಳ್ಳೇಗಾಲ, ಜೂ.26- ಇದೇನು ಭೂದೇವಿಗೆ ಹಾಲಿನ ಅಭಿಷೇಕ ಮಾಡಲೆಂದು ಧರೆಗಿಳಿಯುತಿಹಳೇನು ಎಂಬಂತೆ ಹಾಲ್ನೊರೆಯಂತೆ ಬಾನೆತ್ತರದಿಂದ ದುಮ್ಮಿಕ್ಕುತ್ತಿರುವ ಕಾವೇರಿ ಕೈಬೀಸಿ ಕರೆಯುತಿಹಳು ನಲಿ ನಲಿದು ನರ್ತಿಸುತ್ತಾ ಬರುವ ಪ್ರವಾಸಿಗರನ್ನು. ಭೂಲೋಕದ ಸ್ವರ್ಗದಂತಿರುವ ತಾಲ್ಲೂಕಿನ ವಿಶ್ವ ವಿಖ್ಯಾತ ಭರಚುಕ್ಕಿ ಜಲಪಾತದ ಈ ರುದ್ರ ರಮಣಿಯ ದೃಶ್ಯ ನೋಡಲು ಕಣ್ಣುಗಳೆರಡು ಸಾಲದು.
ಕಾವೇರಿಯ ಈ ವೈಭವವನ್ನು ನೋಡಲು ಕಳೆದ 15 ದಿನಗಳಿಂದ ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಆಗಮಿಸುತ್ತಿರುವುದು ಜಲಪಾತದ ಸೊಬಗನ್ನು ಇಮ್ಮಡಿಗೊಳಿಸಿದೆ.
ಸುತ್ತಲು ಬೆಟ್ಟಗಳ ಸಾಲು, ದಟ್ಟಾರಣ್ಯ. ಹಸಿರು ಹೊದ್ದ ಸಾಲುಗಳ ನಡುವೆ ಸುಮಾರು 1.ಕಿ.ಮೀ ಅಗಲ ಹಾಗೂ 100 ಅಡಿ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತದ ದೃಶ್ಯವನ್ನು ನೋಡಲು ನಯನ ಮನೋಹರ. ನೀರಿನ ಭೋರ್ಗರೆತ. ಅದರ ತಂಗಾಳಿ ನಡುವೆ ನಲಿ ನಲಿದು ಧರೆಗಿಳಿವ ಪ್ರಾಕೃತಿಕ ಸೊಬಗನ್ನು ಬಣ್ಣಿಸಲಸಾಧ್ಯ.
ಇತ್ತೀಚೆಗೆ ಕರಾವಳಿ ಪ್ರದೇಶಗಳಾದ ಕೇರಳದ ವೈನಾಡು ಜಿಲ್ಲೆ ಹಾಗೂ ರಾಜ್ಯದ ಕೊಡಗು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿ ಈ ಭಾಗದ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಕಬಿನಿ ಜಲಾಶಯ, ನುಗು ಜಲಾಶಯ ಹಾಗೂ ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.
ಇತ್ತ ವಿಶ್ವ ವಿಖ್ಯಾತ ತಾಲ್ಲೂಕಿನ ಭರಚುಕ್ಕಿ ಜಲಪಾತದಲ್ಲಿ ಬಾನೆತ್ತರದಿಂದ ಧುಮ್ಮಿಕ್ಕುತ್ತಿರುವ ಕಾವೇರಿಯ ರುದ್ರ ರಮಣಿಯ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕರ್ನಾಟಕ ಹಾಗೂ ತಮಿಳು ನಾಡು 2 ರಾಜ್ಯಗಳಲ್ಲೂ ಹರಿದು ತನ್ನ ವನಪು ವೈಯಾರಗಳಿಂದ ಜಲಾನಯನ ಪಾತ್ರದುದ್ದಕ್ಕೂ ವಿವಿದೆಡೆ ರುದ್ರ ರಮಣೀಯ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸೃಷ್ಟಿಸಿರುವ ರಾಜ್ಯದ ಜೀವನದಿ ಕೊಡಗಿನ ಬೆಡಗಿ ಕಾವೇರಿ ರಂಗನತಿಟ್ಟು, ಶ್ರೀರಂಗಪಟ್ಟಣ, ಶಿವನಸಮುದ್ರ, ತಮಿಳುನಾಡಿನ ಶ್ರೀರಂಗಂ ಗಳಲ್ಲಿ ದ್ವೀಪಗಳನ್ನು ನಿರ್ಮಿಸಿದ್ದಾಳೆ. ಹಾಗೂ ತಾಲ್ಲೂಕಿನ ಶಿವನಸಮುದ್ರದಲ್ಲಿ ನಿರ್ಮಿಸಿರುವ ಭರಚುಕ್ಕಿ, ಗಗನಚುಕ್ಕಿ ವಿಶ್ವವಿಖ್ಯಾತ ಜಲಪಾತಗಳು, ಗಡಿಭಾಗದಲ್ಲಿರುವ ಹೊಗೇನಕಲ್ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಜುಲೈ-ಆಗಸ್ಟ್ ತಿಂಗಳಲ್ಲಿ ಭರಚುಕ್ಕಿ, ಗಗನಚುಕ್ಕಿ ಜಲಪಾತಗಳನ್ನು ನೋಡುವುದೇ ಆನಂದ.
ಆದರೆ ಈ ಬಾರಿ ವಾಡಿಕೆಗಿಂತ ಮೊದಲೇ ಉತ್ತಮ ಮಳೆಯಾಗಿ ಜಲಾಶಯಗಳು ತುಂಬುತ್ತಿರುವುದರಿಂದ ಜೂನ್ ತಿಂಗಳಲ್ಲೂ ಕಾವೇರಿ ಮೈತುಂಬಿ ಹರಿಯುತ್ತಿರುವುದರಿಂದ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಕೊಡಗಿನಲ್ಲಿ ಹುಟ್ಟಿ ಹರಿದು ಬರುವ ಕಾವೇರಿಗೆ ಕೇರಳದಲ್ಲಿ ಉಗಮಿಸುವ ಕಬಿನಿ ನದಿ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರದಲ್ಲಿ ಜೊತೆಯಾಗುತ್ತಾಳೆ. ಕೇರಳದ ವೈನಾಡು ಜಿಲ್ಲೆ ಹಾಗೂ ರಾಜ್ಯದ ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಇತ್ತೀಚೆಗೆ ಮೈದುಂಬಿ ಕೊಂಡಿರುವ ಕಾವೇರಿ ಧುಮ್ಮಿಕ್ಕಿ ಹರಿಯುತ್ತಿರುವುದನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.
ಇದೇ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರ ಭರಚುಕ್ಕಿ ಜಲಪಾತದಲ್ಲಿ ಪ್ರತಿ ವರ್ಷ ಜಲಪೆÇೀತೋತ್ಸವ ನಡೆಸಲು ಮುಂದಾಗುತ್ತಿತ್ತು. ಚಾಮರಾಜನಗರ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಜಲಪಾತಕ್ಕೆ ರಂಗು ರಂಗಿನ (ಲೇಸರ್ ಲೈಟ್) ವಿದ್ಯುತ್ ದೀಪಗಳನ್ನು ಜಲಪಾತಕ್ಕೆ ಅಳವಡಿಸಿ ಸುಗಮ ಸಂಗೀತ, ಜನಪದ ಝೇಂಕಾರ, ಸಂಗೀತ ಝೇಂಕಾರ, ನೃತ್ಯ ಸಂಜೆ, ಜನಪದ ಸಂಗೀತ ಗಂಗೆ, ನಾದಸ್ವರ, ಪೂಜಾಕುಣಿತ, ವೀರಗಾಸೆ, ಗೊರವರ ಕುಣಿತ, ಕಂಸಾಳೆ ನೃತ್ಯ ಸೇರಿದಂತೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ