ಮುಂಬೈ, ಜೂ.26 (ಪಿಟಿಐ)-ಕಚ್ಚಾ ತೈಲಗಳ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕ ಬುನಾದಿ ಸದೃಢವಾಗಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಏಷ್ಯಾ ಮೂಲಸೌಕರ್ಯಾಭಿವೃದ್ದಿ ಬಂಡವಾಳ ಹೂಡಿಕೆ ಬ್ಯಾಂಕ್ (ಎಐಐಬಿ)ನ ಗೌರ್ನರ್‍ಗಳ ತೃತೀಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ವಿತ್ತ ಸದೃಢತೆಗೆ ಬಿಜೆಪಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸ್ಥಿರ ದರಗಳೊಂದಿಗೆ ನಮ್ಮ ಬೃಹತ್ ಆರ್ಥಿಕತೆ ಬುನಾದಿ ಬಲವಾಗಿದೆ. ಬಾಹ್ಯ ವಲಯಗಳು ಚೇತರಿಕೆಯಾಗಿದೆ ಹಾಗೂ ಆರ್ಥಿಕ ಸನ್ನಿವೇಶ ನಿಯಂತ್ರಣದಲ್ಲಿದೆ. ಕಚ್ಚಾ ತೈಲಗಳ ಬೆಲೆಯಲ್ಲಿ ಏರಿಕೆಯಾಗಿದ್ದರೂ, ಹಣದುಬ್ಬರ ಹತೋಟಿ ವಲಯದಲ್ಲೇ ಇದೆ ಎಂದು ಮೋದಿ ಹೇಳಿದರು.
ಆರ್ಥಿಕ ಪ್ರಗತಿ ಪಥವನ್ನು ಸರಿದಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಜಿಡಿಪಿ ಶೇಕಡವಾರು ಏರಿಕೆಯಿಂದಾಗಿ ಸರ್ಕಾರದ ಸಾಲ ಮೊತ್ತ ಇಳಿಮುಖವಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. ದೀರ್ಘ ಕಾಲದ ನಂತರ ಭಾರತದ ಶ್ರೇಯಾಂಕ ಮೇಲ್ದರ್ಜೆಗೇರಿದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತವು ಉಜ್ವಲ ಬಿಂದುವಾಗಿ ಹೊರಹೊಮ್ಮಿದೆ. 2.6 ಲಕ್ಷ ಕೋಟಿ ಜಿಡಿಪಿ ಡಾಲರ್‍ನೊಂದಿಗೆ ಜಾಗತಿಕ ಬೆಳವಣಿಗೆ ಕಂಡಿದೆ. ಇದು ಈ ವರ್ಷ ಶೇ.7.4ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.