ಸಹಕಾರಿ ಬ್ಯಾಂಕ್ ಗಳ ರೈತರ ರೂ. 11 ಸಾವಿರ ಕೋಟಿ ಸಾಲ ಮನ್ನಾಗೆ ಸರ್ಕಾರದ ಚಿಂತನೆ

ಬೆಂಗಳೂರು: ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ರೂ.11 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಸಹಕಾರಿ ಬ್ಯಾಂಕ್ ಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರ ಜೊತೆ ವಿಧಾನಸೌಧದಲ್ಲಿ ನಿನ್ನೆಯಷ್ಟೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಭೆ ನಡೆಸಿ, ಮಾತುಕತೆ ನಡೆಸಿದ್ದಾರೆ.

ಸಭೆ ಬಳಿಕ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು, ರೈತರ ಸಾಲಮನ್ನಾವನ್ನು ಎರಡು ಹಂತಗಳಲ್ಲಿ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

ಸಾಲಮನ್ನಾ ವಿಚಾರದಲ್ಲಿ ಅಧಿಕಾರಿಗಳ ಮತ್ತು ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ರೈತರಿಗೆ ಸಿಹಿ ಸುದ್ದಿ ನೀಡಲಿದ್ದಾರೆಂದು ಹೇಳಿದ್ದಾರೆ.

ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳ ಸಾಲ ಮನ್ನಾ ಆಗಲಿದೆ. ಬೆಳೆ ಸಾಲವನ್ನು ಮಾತ್ರ ಮೊದಲಿಗೆ ಮನ್ನಾ ಮಾಡಲಾಗುತ್ತದೆ. ಬೆಳೆ ಸಾಲದ ವಿಚಾರದಲ್ಲಿ ಸಣ್ಣ ರೈತರು ಮಾತ್ರವಲ್ಲದೇ, ಎಲ್ಲಾ ರೈತರ ಸಾಲಮನ್ನಾ ಮಾಡಲಾಗುವುದು. ಎರಡನೇ ಹಂತದಲ್ಲಿ ಕೃಷಿ ಉಪಕರಣಗಳ ಖರೀದಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡುವಂತಹ ಮತ್ತು ರೈತ ಸಮೂಹಕ್ಕೆ ಲಾಭವಾಗುವಂತಹ ಸಾಲಮನ್ನಾ ಯೋಜನೆ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಿಂದಿನ ಸರ್ಕಾರ ಸಹಕಾರಿ ಸಂಸ್ಥೆಗಳಲ್ಲಿನ ರೂ.50 ಸಾವಿರ ವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಿದೆ. ಇದರ ಮೊತ್ತವತು 8 ಸಾವಿರ ಕೋಟಿಗಿಂತ ಅಧಿಕವಾಗಿದೆ. ಮತ್ತೊಮ್ಮೆ ಸಾಲ ಮನ್ನಾ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ರೂ.10 ಸಾವಿರ ಕೋಟಿ ಹೊರೆ ಬೀಳಲಿದೆ. ಮುಂದಿನ ಮಾರ್ಚ್ ಅಂತ್ಯದವರೆಗೆ ಸಾಲಮನ್ನಾ ಮಾಡಬೇಕು ಎಂಬ ಒತ್ತಾಯವಿದೆ. ಇದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್’ಗಳಲ್ಲಿ ರಾಜ್ಯದ ರೈತರು ಪಡೆದಿರುವ ಬೆಳೆ ಸಾಲದ ವಿವಗಳನ್ನು ಕಲೆ ಹಾಕಬೇಕಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ 6ನೇ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನಕ್ಕೆ ರೂ.17 ಸಾವಿರ ಕೋಟಿಗಿಂತ ಹೆಚ್ಚು ಮೊತ್ತದ ಅವಶ್ಯಕತೆ ಇದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ನಲ್ಲಿ ಸರ್ಕಾರದ ತೀರ್ಮಾನಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಧಿಕಾರಿಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದ ಅವರು, ಸಮ್ಮಿಶ್ರ ಸರ್ಕಾರವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಎಂಬುದಾಗಿ ಕೆಲ ಅಧಿಕಾರಿಗಳು ಮಾತನಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಹುದ್ದೆ ಯಾರೋ ನೀಡಿದ ಭಿಕ್ಷೆಯಲ್ಲ. ಸರ್ಕಾರ ಅಧಿಕಾರದಲ್ಲಿ ಉಳಿಯುವ ಬಗ್ಗೆ ಅನಗತ್ಯ ಚರ್ಚೆಗಳು ಬೇಕಾಗಿಲ್ಲ. ಅಧಿಕಾರಿಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಸಾಲಮನ್ನಾ ವಿಚಾರದಲ್ಲಿ ಸಲಹೆ, ಸೂಚನೆಗಳನ್ನು ನೀಡಿ. ಇಲ್ಲದಿದ್ದರೆ ನಿಮ್ಮ ಪಾಡಿಗೆ ನೀವು ಕೆಲ ಮಾಡಿ ಎಂದು ತಾಕೀತು ಮಾಡಿದ್ದಾರೆ.

ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸುವ ಕರ್ತವ್ಯ ಮತ್ತು ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಸರ್ಕಾರದ ಅಸ್ತಿತ್ವದ ಬಗ್ಗೆ ಸಂದೇಹಗಳು ಬೇಡ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಅನುಕೂಲವಾಗಬೇಕು. ರೈತರ ಹೆಸರಲ್ಲಿ ಮಧ್ಯವರ್ತಿಗಳಿಗೆ ಲಾಭವಾಗಬಾರದು. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ