ಬೆಂಗಳೂರು, ಜೂ.26- ರಾಜ್ಯಾದ್ಯಂತ ಹೊಸದಾಗಿ ಪೋಲಿಸ್ ಠಾಣೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಜೆಟ್‍ನಲ್ಲಿ ಆರ್ಥಿಕ ಇತಿಮಿತಿಗಳನ್ನು ಪರಿಗಣಿಸಿ ಹೊಸ ಠಾಣೆಗಳನ್ನು ಮಂಜೂರು ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಹೇಳಿದರು.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಠಾಣೆಗಳಿಗೆ ಸ್ಥಳೀಯ ಬೇಡಿಕೆ ಆಧರಿಸಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆರ್ಥಿಕ ಸ್ಥಿತಿಗತಿಗಳನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಎಲ್ಲವನ್ನು ಪರಿಶೀಲಿಸಿ ಹೊಸ ಠಾಣೆಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಹೇಳೀದರು.
ಪ್ರತಿವರ್ಷ 5 ಸಾವಿರ ಪೋಲಿಸ್ರನ್ನು ನೇಮಕಾತಿ ಮಾಡಲು ಅಗತ್ಯವಾದ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತದೆ. ನಿವೃತ್ತಿ ಸೇರಿದಂತೆ ವಿವಿಧ ರೀತಿಯಲ್ಲಿ ತೆರವಾಗುವ ಹುದ್ದೆಗಳಿಗೆ ಕಾಲ ಕಾಲಕ್ಕೆ ಭರ್ತಿ ಮಾಡಿಕೊಳ್ಳಬೇಕು, ಅದಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದು. ನೇಮಕಾತಿ ಹೊಂದಿದವರಿಗೆ ತರಬೇತಿ ನೀಡಲು ಅಗತ್ಯ ಮೂಲಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 12 ಖಾಯಂ ಹಾಗೂ 22 ತಾತ್ಕಾಲಿಕ ತರಬೇತಿ ಕೇಂದ್ರಗಳಿವೆ. ತಾತ್ಕಾಲಿಕ ತರಬೇತಿ ಕೇಂದ್ರಗಳಿಗೆ ಬೋಧಕ ಸಿಬ್ಬಂದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ನೇಮಕಾತಿ ಹೊಂದಿದವರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡುವಂತೆÉ ಕೇಂದ್ರಗಳನ್ನು ಸಜ್ಜುಗೊಳಿಸಲಾಗುವುದು ಎಂದರು.