ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಹಂತದತ್ತ ಮುಖಮಾಡಿದ್ದು, ಗ್ರೂಪ್ ಸ್ಟೇಜ್ ಪಂದ್ಯಗಳು ಮುಕ್ತಾಯವಾಗುತ್ತಿವೆ. ಈ ಹಂತದಲ್ಲಿ ಮುಂದಿನ ಹಂತಕ್ಕೆ ಹೋದ ಮತ್ತು ಟೂರ್ನಿಯಿಂದ ಹೊರಬಿದ್ದ ತಂಡಗಳ ಮಾಹಿತಿ ಇಂತಿದೆ.
ಗ್ರೂಪ್ ಎ
ಗ್ರೂಪ್ ಎ ನಲ್ಲಿ ರಷ್ಯಾ ಮತ್ತು ಉರುಗ್ವೇ ತಂಡಗು ಈಗಾಗಲೇ ಮುಂದಿನ ಹಂತಕ್ಕೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, 16ನೇ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ಇಂದು ಪರಸ್ಪರ ಸೆಣಸಲಿವೆ. ಇನ್ನು ಗ್ರೂಪ್ ನಲ್ಲಿದ್ದ ಈಜಿಪ್ಟ್ ಮತ್ತು ಸೌದಿ ಅರೇಬಿಯಾ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.
ಗ್ರೂಪ್ ಬಿ
ಗ್ರೂಪ್ ಬಿಯಲ್ಲಿ ಮೊರಾಕ್ಕೋ ತಂಡ ಟೂರ್ನಿಯಿಂದ ಹೊರದಬ್ಬಲ್ಪಟ್ಟಿದ್ದು, ಪೋರ್ಚುಗಲ್ ಮತ್ತು ಸ್ಪೇನ್ ತಂಡಗಳು ತಲಾ 4 ಅಂಕಗಳೊಂದಿಗೆ ಗ್ರೂಪ್ ನಲ್ಲಿ ಅಗ್ರ ಸ್ಥಾನದಲ್ಲಿವೆ. ಗ್ರೂಪ್ ಮತ್ತೊಂದು ತಂಡ ಇರಾನ್ 3 ಅಂಕಗಳಿಸಿದ್ದು, ಇಂದು ಮೊರಾಕ್ಕೋ ಸ್ಪೇನ್ ವಿರುದ್ಧ ಮತ್ತು ಪೋರ್ಚುಗಲ್ ತಂಡ ಇರಾನ್ ವಿರುದ್ಧ ಸೆಣಸಲಿದೆ. ಸ್ಪೇನ್, ಪೋರ್ಚುಗಲ್ ಮತ್ತು ಇರಾನ್ ತಂಡಗಳಿಗೆ ಈ ಪಂದ್ಯಗಳು ತಮ್ಮ ಅಸ್ಥಿತ್ವದ ಪಂದ್ಯವಾಗಿದ್ದು, ಮೊರಾಕೋಗೆ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿದೆ. ಗ್ರೂಪ್ ನಲ್ಲಿ ಅಗ್ರ ಮತ್ತು 2ನೇ ಸ್ಥಾನಕ್ಕೆ ಮೂರು ತಂಡಗಳ ನಡುವೆ ಪೈಪೋಟಿ ಎದುರಾಗಿದೆ. ಪೋರ್ಚುಗಲ್ ವಿರುದ್ಧ ಇರಾನ್ ಗೆದ್ದರೆ ಆಗ ಇರಾನ್ ಅಂಕಗಳಿಗೆ 5ಕ್ಕೇರಿ ಗ್ರೂಪ್ ನಲ್ಲಿ ಇರಾನ್ ಅಗ್ರಸ್ಥಾನಕ್ಕೆ ಏರುತ್ತದೆ. ಅಲ್ಲದೆ ಮುಂದಿನ ಹಂತಕ್ಕೆ ನಡೆಯಲಿದೆ. ಒಂದು ವೇಳೆ ಪೋರ್ಚುಗಲ್ ಗೆದ್ದರೆ ಆಗ ತಂಡದ ಅಂಕ 6ಕ್ಕೇರಲಿದ್ದು, ಆಗ ಪೋರ್ಚುಗಲ್ ಮತ್ತು ಸ್ಪೇನ್ ಮುಂದಿನ ಹಂತಕ್ಕೆ ಮುನ್ನಡೆಯಲಿದೆ,
ಗ್ರೂಪ್ ಸಿ
ಗ್ಪೂಪ್ ಸಿ ಯಲ್ಲಿ 6 ಅಂಕ ಹೊಂದಿರುವ ಫ್ರಾನ್ಸ್ ಮುಂದಿನ ಹಂತಕ್ಕೆ ಜಿಗಿದಿದ್ದು, 4 ಅಂಕಗಳಿಸಿರುವ ಡೆನ್ಮಾರ್ಕ್ 2ನೇ ಸ್ಥಾನದಲ್ಲಿದೆ. ಗ್ರೂಪ್ ನ ಮತ್ತೊಂದು ತಂಡ ಪೆರು ಟೂರ್ನಿಯಿಂದ ಹೊರಬಿದ್ದಿದ್ದು, ಎರಡನೇ ಸ್ಥಾನಕ್ಕಾಗಿ ಇಂದು ಡೆನ್ಮಾರ್ಕ್ ಫ್ರಾನ್ಸ್ ನೊಡನೆ ಸೆಣಸಲಿದೆ. ಆಸ್ಟ್ರೇಲಿಯಾ ಪೆರು ವಿರುದ್ಧ ಹೋರಾಡಲಿದೆ.
ಗ್ರೂಪ್ ಡಿ
ಗ್ರೂಪ್ ಡಿಯಲ್ಲಿ ಈಗಾಗಲೇ ಕ್ರೊವೇಷಿಯಾ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದು, ಉಳಿದಂತೆ ನೈಜಿರಿಯಾ 3 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಗ್ರೂಪ್ ನ ಪ್ರಬಲ ತಂಡವಾಗಿದ್ದ ಅರ್ಜೆಂಟೀನಾ ಮತ್ತು ಐಲ್ಯಾಂಡ್ ತಂಡಗಳು ತಲಾ 1 ಅಂಕಗಳಿಸಿವೆ. ಇಂದು ಐಲ್ಯಾಂಡ್ ಕ್ರೊವೇಷಿಯಾ ವಿರುದ್ಧ ಸೆಣಸಲಿದ್ದು, ಅರ್ಜೆಂಟೀನಾ ನೈಜಿರಿಯಾ ವಿರುದ್ಧ ಸೆಣಸಾಡಲಿದೆ. ನೈಜಿರಿಯಾ ವಿರುದ್ಧ ಅರ್ಜೆಂಟೀನಾ ಗೆದ್ದರೆ ಆಗ ತಂಡದ ಅಂಕಗಳಿಕೆ ಮೂರಕ್ಕೇರಲಿದ್ದು, ಅತ್ತ ಕ್ರೊವೇಷಿಯಾ ವಿರುದ್ಧ ಐಲ್ಯಾಂಡ್ ಗೆದ್ದರೂ ತಂಡದ ಅಂಕಗಳಿಕೆ ಮೂರಕ್ಕೇ ಏರಲಿದೆ.
ಗ್ರೂಪ್ ಇ
ಗ್ರೂಪ್ ಇ ನಲ್ಲಿ ಈವರೆಗೂ ಯಾವುದೇ ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಮುನ್ನಡೆದಿಲ್ಲ. ಈ ಪೈಕಿ ಕೋಸ್ಟರಿಕಾ ಟೂರ್ನಿಯಿಂದ ಹೊರಬಿದ್ದಿದ್ದು, ಬ್ರೆಜಿಲ್ ಮತ್ತು ಸ್ವಿಟ್ಜರ್ಲೆಂಡ್ ತಂಡಗಳು ತಲಾ 4 ಅಂಕ ಹೊಂದಿದ್ದು, ಸರ್ಬಿಯಾ 3 ಅಂಕಗಳನ್ನು ಹೊಂದಿದೆ. ಬುಧವಾರ ಬ್ರೆಜಿಲ್ ವಿರುದ್ಧ ಸರ್ಬಿಯಾ ಸೆಣಸಾಡಲಿದ್ದು, ಸ್ವಿಟ್ಜರ್ಲೆಂಡ್ ಕೋಸ್ಟರಿಕಾ ತಂಡವನ್ನು ಎದುರಿಸಲಿದೆ.
ಗ್ರೂಪ್ ಎಫ್
ಗ್ರೂಪ್ ಎಫ್ ನಲ್ಲಿ 6 ಅಂಕಗಳೊಂದಿಗೆ ಮೆಕ್ಸಿಕೋ ಅಗ್ರ ಸ್ಥಾನದಲ್ಲಿದೆಯಾದರೂ ಮುಂದಿನ ಹಂತಕ್ಕೆ ಅದರ ಸ್ಥಾನ ಇನ್ನೂ ಭದ್ರವಾಗಿಲ್ಲ. ಜರ್ಮನಿ ಮತ್ತು ಸ್ವೀಡನ್ ತಂಡಗಳು ತಲಾ 3 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿವೆ. ಬುಧವಾರ ಜರ್ಮನಿ ದಕ್ಷಿಣ ಕೊರಿಯಾ ವಿರುದ್ದ ಸೆಣಸಲಿದ್ದು, ಸ್ವೀಡನ್ ಮೆಕ್ಸಿಕೋ ಎದುರಿಸಲಿದೆ. ದಕ್ಷಿಣ ಕೊರಿಯಾ ಟೂರ್ನಿಯಿಂದ ಹೊರಬಿದ್ದಿದೆ.
ಗ್ರೂಪ್ ಜಿ
ಗ್ರೂಪ್ ಜಿಯಲ್ಲಿ ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳು ತಲಾ 6 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಮುನ್ನಡೆದಿದ್ದು, ಶೂನ್ಯ ಸಂಪಾದನೆಯೊಂದಿಗೆ ಟ್ಯುನಿಷಿಯಾ ಮತ್ತು ಪನಾಮ ತಂಡಗಳು ಮನೆಯತ್ತ ಮುಖಮಾಡಿವೆ.
ಗ್ರೂಪ್ ಹೆಚ್
ಗ್ರೂಪ್ ಹೆಚ್ ನಲ್ಲಿ ಜಪಾನ್ ಮತ್ತು ಸೆನೆಗಲ್ ತಲಾ 4 ಅಂಕಗಳನ್ನು ಗಳಿಸಿದ್ದು, ಕೊಲಂಬಿಯಾ 3 ಅಂಕಗಳನ್ನು ಹೊಂದಿದೆ, ಶೂನ್ಯ ಸಾಧನೆಯೊಂದಿಗೆ ಪೋಲ್ಯಾಂಡ್ ಟೂರ್ನಿಯಿಂದ ಹೊರಬಿದ್ದಿದ್ದು, 1 ಮತ್ತು 2ನೇ ಸ್ಥಾನಕ್ಕಾಗಿ ಜಪಾನ್ ಮತ್ತು ಸೆನೆಗಲ್, ಕೊಲಂಬಿಯಾ ತಂಡಗಳು ಸೆಣಸಲಿವೆ.